ಉಡುಪಿ: ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೂವರು ಅಂತಿಮ ಕಣದಲ್ಲಿ
ಉಡುಪಿ, ಎ.12: ಕಳೆದೆರಡು ಬಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಒಟ್ಟು ಮೂವರು ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೇ9ರಂದು ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಉಡುಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಮೂವರು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂದೆಗೆದುಕೊಳ್ಳಲು ಇಂದು ಕೊನೆಯ ದಿನವಾಗಿತ್ತು. ಹೀಗಾಗಿ ಹಾಲಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿಯ ಸುಬ್ರಹ್ಮಣ್ಯ ಬಾಸ್ರಿ ಕೆ.ಎಸ್. ಹಾಗೂ ಬೈಂದೂರಿನ ಡಾ.ಸುಬ್ರಹ್ಮಣ್ಯ ಭಟ್ ಅವರು ಇದೀಗ ಮೇ 9ರಂದು ನಡೆಯುವ ಚುನಾವಣೆಗೆ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.
ಮೇ 9ರಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ಆಯಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ 22 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಕಸಾಪ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಿಂದ ಒಟ್ಟು 1984 ಮಂದಿ ಅರ್ಹ ಮತದಾರರಿದ್ದಾರೆ. ರಾಜ್ಯದಲ್ಲಿ ಅತ್ಯಂತ ಕನಿಷ್ಠ ಮತದಾರರಿರುವ ಜಿಲ್ಲೆ ಉಡುಪಿಯಾಗಿದ್ದು, ಬೆಂಗಳೂರು ನಗರದಲ್ಲಿ 36,389 ಹಾಗೂ ಮಂಡ್ಯ ಜಿಲ್ಲೆಯಲ್ಲಿ 24,207 ಮತದಾರರಿದ್ದು ಮೊದಲೆರಡು ಸ್ಥಾನದಲ್ಲಿವೆ.