ಅಮೆರಿಕ: ಪೊಲೀಸರಿಂದ ಇನ್ನೋರ್ವ ಕರಿಯ ಯುವಕನ ಹತ್ಯೆ; ಭುಗಿಲೆದ್ದ ಪ್ರತಿಭಟನೆ

Update: 2021-04-12 15:19 GMT

ಮಿನಿಯಪೊಲಿಸ್ (ಅಮೆರಿಕ), ಎ. 12: ಅಮೆರಿಕದ ಮಿನಿಯಪೊಲಿಸ್ ನಗರದ ಉಪನಗರವೊಂದರಲ್ಲಿ ರವಿವಾರ ರಾತ್ರಿ ಕರಿಯ ಯುವಕನೊಬ್ಬನನ್ನು ಪೊಲೀಸರು ಗುಂಡು ಹಾರಿಸಿ ಕೊಂದ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ.

ಇದೇ ನಗರದಲ್ಲಿ ಕಳೆದ ವರ್ಷ ಪೊಲೀಸರ ಕೈಯಲ್ಲಿ ಜಾರ್ಜ್ ಫ್ಲಾಯ್ಡಾ ಎಂಬ ಕರಿಯ ವ್ಯಕ್ತಿ ಮೃತಪಟ್ಟಿದ್ದು, ಆ ಪ್ರಕರಣದ ವಿಚಾರಣೆ ಈಗ ನಡೆಯುತ್ತಿರುವಂತೆಯೇ ಹೊಸ ಪ್ರಕರಣವೊಂದು ಸಂಭವಿಸಿದೆ.

ಯುವಕ ಮೃತಪಟ್ಟ ಬೆನ್ನಿಗೇ, ಮಿನಿಯಪೊಲಿಸ್ ನಗರದ ವಾಯುವ್ಯ ಭಾಗದ ಬ್ರೂಕ್ಲಿನ್ ಸೆಂಟರ್‌ನಲ್ಲಿರುವ ಪೊಲೀಸ್ ಠಾಣೆಯ ಎದುರು ನೂರಾರು ಮಂದಿ ಜಮಾಯಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ‘ಫ್ಲಾಶ್ ಬ್ಯಾಂಗ್’ (ತೀವ್ರ ಬೆಳಕು ಮತ್ತು ಅಗಾಧ ಸದ್ದು ಉತ್ಪಾದಿಸುವ ಸಾಧನ)ಗಳನ್ನು ಬಳಸಿದರು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

20 ವರ್ಷದ ಕರಿಯ ಯುವಕ ಡಾಂಟ್ ರೈಟ್ ಪೊಲೀಸರ ಗುಂಡಿಗೆ ಬಲಿಯಾಗಿರುವ ಯುವಕ.

ನನ್ನನ್ನು ಪೊಲೀಸರು ಹಿಡಿದಿಟ್ಟುಕೊಂಡಿದ್ದಾರೆ ಎಂಬುದಾಗಿ ಡಾಂಟ್ ರೈಟ್ ನನಗೆ ಫೋನ್ ಮಾಡಿ ಹೇಳಿದ್ದಾನೆ ಎಂದು ಅವರ ತಾಯಿ ಕೇಟೀ ರೈಟ್ ರವಿವಾರ ಸಂಜೆ ಜನರ ಗುಂಪೊಂದಕ್ಕೆ ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ‘‘ಫೋನ್ ಕೆಳಗಿಡುವಂತೆ ಪೊಲೀಸರು ನನ್ನ ಮಗನಿಗೆ ಹೇಳುತ್ತಿರುವುದು ನನಗೆ ಕೇಳಿಸಿತು. ಬಳಿಕ ಓರ್ವ ಪೊಲೀಸ್ ಅಧಿಕಾರಿ ಫೋನ್ ಕರೆಯನ್ನು ಕಡಿತಗೊಳಿಸಿದರು. ಅವನಿಗೆ ಗುಂಡು ಹಾರಿಸಲಾಗಿದೆ ಎಂಬುದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಅವರ ಗೆಳತಿ ನನಗೆ ಹೇಳಿದಳು’’ ಎಂದು ಕೇಟೀ ಹೇಳಿದರು.

  ಸಾವಿನ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಮಂದಿ ರವಿವಾರ ಸಂಜೆ ಬ್ರೂಕ್ಲಿನ್ ಸೆಂಟರ್‌ನ ಹೊರಗಡೆ ಜಮಾಯಿಸಿದರು. ಆಗ ಪೊಲೀಸರು ಮತ್ತು ಪ್ರತಿಭಟನಾಕಾರರು ಮುಖಾಮುಖಿಯಾದರು.

   ಕಳೆದ ವರ್ಷದ ಮೇ ತಿಂಗಳಲ್ಲಿ ಮಿನಿಯಪೊಲಿಸ್ ನಗರದಲ್ಲಿ ಪೊಲೀಸರ ಗುಂಡಿಗೆ ಜಾರ್ಜ್ ಫ್ಲಾಯ್ಡಾ ಬಲಿಯಾಗಿರುವುದಕ್ಕೆ ಸಂಬಂಧಿಸಿದ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್ ವಿಚಾರಣೆ ಈಗ ಅಮೆರಿಕದ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದೆ.

ಸಾರಿಗೆ ನಿಯಮ ಉಲ್ಲಂಘನೆಗಾಗಿ ತಡೆದ ಪೊಲೀಸರು:

ಸಾರಿಗೆ ನಿಯಮ ಉಲ್ಲಂಘನೆಗಾಗಿ ಪೊಲೀಸರು ಕಾರಿನ ಚಾಲಕನೊಬ್ಬನನ್ನು ತಡೆದು ನಿಲ್ಲಿಸಿದರು ಎಂದು ಬ್ರೂಕ್‌ಲಿನ್ ಸೆಂಟರ್ ಪೊಲೀಸ್ ಇಲಾಖೆ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆತನ ವಿರುದ್ಧ ಈಗಾಗಲೇ ಬಂಧನ ವಾರಂಟೊಂದು ಚಾಲ್ತಿಯಲ್ಲಿರುವುದನ್ನು ಮನಗಂಡ ಪೊಲೀಸರು ಆತನ ಬಂಧನಕ್ಕೆ ಮುಂದಾದರು ಎಂದು ಪೊಲೀಸರು ಹೇಳಿದ್ದಾರೆ. ಆತ ತನ್ನ ಕಾರನ್ನೇರಿದಾಗ ಪೊಲೀಸ್ ಅಧಿಕಾರಿಯೊಬ್ಬರು ಅವನತ್ತ ಗುಂಡು ಹಾರಿಸಿದರು. ಆಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News