ಉಡುಪಿ ಜಿಲ್ಲೆಯಾದ್ಯಂತ ಮಳೆ, ಗಾಳಿ, ಸಿಡಿಲಿಗೆ ಅಪಾರ ಹಾನಿ
ಉಡುಪಿ, ಎ.12: ರವಿವಾರ ಸಂಜೆಯ ಬಳಿಕ ಗಾಳಿ-ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಅಪಾರ ಹಾನಿ ಸಂಭವಿಸಿದೆ. ಗಾಳಿಗೆ ಮರ ಉರುಳಿ, ಸಿಡಿಲು ಬಡಿದು ನೂರಕ್ಕೂ ಅಧಿಕ ಮನೆಗಳಿಗೆ ಲಕ್ಷಾಂತರ ರೂ.ಗಳ ಹಾನಿಯಾಗಿವೆ. ಅನೇಕ ಮನೆಗಳು ಮಳೆಗೆ ಭಾಗಶ: ಕುಸಿದಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಮಾಹಿತಿಗಳು ತಿಳಿಸಿವೆ.
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ಸಂತೋಷ ಶೆಟ್ಟಿ ಎಂಬವರ ಅಡಿಕೆ ಮತ್ತು ತೆಂಗಿನ ಮರಗಳಿಗೆ ಸಿಡಿಲು ಬಡಿದು 20,000ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಅದೇ ಗ್ರಾಮದ ಪ್ರಸನ್ನ ಶೆಟ್ಟಿ ಮತ್ತು ಗೋವಿಂದ ಶೆಟ್ಟಿ ಎಂಬವರ ಮನೆಗಳಿಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು ತಲಾ 20,000 ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕು ಮಿಯಾರು ಗ್ರಾಮದ ಅಬ್ದುಲ್ ಹಮೀದ್ ಅವರ ಮನೆಯ 15 ಅಡಿಕೆ ಮರಗಳು, ಇನಾಸ್ ಅವರ ಮನೆಯ ಆರು ಅಡಿಕೆ ಮರ, ಸತ್ಯೇಂದ್ರ ನಾಯಕ್‌ರ 9 ಅಡಿಕೆ ಮರಗಳ ಗಾಳಿಗೆ ಧರಾಶಾಯಿಯಾಗಿವೆ. ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ನೇಮಿರಾಜ ಹೆಗ್ಡೆ ಹಾಗೂ ವೆಂಕಟರಮಣ ಭಟ್ ಇವರ ಮನೆಯ ಅಡಿಕೆ ಕೃಷಿಗೆ ಗಾಳಿ ಮತ್ತು ಮಳೆಯಿಂದ ಅಪಾರ ಹಾನಿ ಸಂಭವಿಸಿರುವ ವರದಿಗಳು ಬಂದಿವೆ.
ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದ ಈಶ್ವರ ನಾಯ್ಕ, ಪ್ರಶಾಂತ ಪೈ, ಪುರುಷ ನಾಯ್ಕ ಹಾಗೂ ರಾಮ ನಾಯ್ಕ ಇವರ ಮನೆಗಳು ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದ್ದು, 70,000ಕ್ಕೂ ಅಧಿಕ ಹಾನಿ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ನಾರಾಯಣ ದೇವಾಡಿಗ, ನಂಚಾರು ಗ್ರಾಮದ ನಾಗರಾಜ, ಸೂರ್ಯನಾಯ್ಕ, ಪ್ರಕಾಶ ನಾಯ್ಕಾ ಹಾಗೂ ಸದಾಶಿವ ಎಂಬವರ ವಾಸ್ತವ್ಯದ ಪಕ್ಕಾ ಮನೆಗಳಿಗೆ ಗಾಳಿ-ಮಳೆಯಿಂದ ಹಾನಿ ಸಂಭವಿಸಿದ್ದು, ಒಟ್ಟು 1.30 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ಇಲ್ಲಿಗೆ ಮಾಹಿತಿ ಬಂದಿದೆ.
ಹೆಬ್ರಿ ತಾಲೂಕು ಬೇಳಂಜೆ ಗ್ರಾಮದ ಗೋಂಟ , ಕುಚ್ಚೂರು ಗ್ರಾಮದ ಬಡಿಯ ಶೆಟ್ಟಿ, ಬೆಳ್ವೆ ಗ್ರಾಮದ ಕುಷ್ಠ ಪೂಜಾರಿ ಇವರ ಮನೆಗಳು ನಿನ್ನೆಯ ಗಾಳಿ-ಮಳೆಗೆ ಭಾಗಶ: ಕುಸಿದಿದ್ದು ಇದರಿಂದ 80,000ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ. ಇನ್ನು ಕಾರ್ಕಳ ತಾಲೂಕು ಮಿಯಾರು ಗ್ರಾಮದ ಶೇಖರ ಶೆಟ್ಟಿ, ವಾಮನ ಪೈ, ಕುಕ್ಕುಜೆ ಗ್ರಾಮದ ಕರುಣಾಕರ ಇವರ ದನದ ಕೊಟ್ಟಿಗೆ, ಜಾರ್ಕಳ ಗ್ರಾಮದ ಚಂದ್ರರಾಜ್ ಹೆಗ್ಡೆ, ಕೆರ್ವಾಶೆ ಗ್ರಾಮದ ಬೋಜ ಪುರಿ, ಹಿರ್ಗಾನ ಗ್ರಾಮದ ಕೃಷ್ಣ, ದುರ್ಗಾ ಗ್ರಾಮದ ಕೃಷ್ಣ ಆಚಾರಿ ಇವರ ಮನೆಗಳಿಗೆ ಸಿಡಿಲು ಬಡಿದು, ಭಾಗಶ: ಕುಸಿದು ಹಾನಿ ಸಂಭವಿಸಿದರೆ, ದುರ್ಗಾ ಗ್ರಾಮದ ಲೋಕು ಹರಿಜನ, ವಿಠಲ ಶೆಟ್ಟಿ ಎಂಬವರ ಮನೆಗಳ ಮೇಲೆ ಮರ ಬಿದ್ದು ಹಾನಿ 70,000ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ.
ರವಿವಾರ ರಾತ್ರಿ ಹೆಬ್ರಿಯಲ್ಲಿ 22ಮಿ.ಮೀ., ಕಾರ್ಕಳ ಮತ್ತು ಬ್ರಹ್ಮಾವರಗಳಲ್ಲಿ ತಲಾ 9ಮಿ.ಮೀ. ಕಾಪು 5ಮಿ.ಮೀ., ಕುಂದಾಪುರ 4ಮಿ.ಮೀ. ಹಾಗೂ ಉಡುಪಿಯಲ್ಲಿ 3ಮಿ.ಮೀ. ಮಳೆ ಸುರಿದ ಬಗ್ಗೆ ವರದಿಗಳು ಬಂದಿವೆ.