ಜನವಸತಿಯಿಲ್ಲದ ಪ್ರದೇಶದಲ್ಲಿ ತಳ್ಳುಗಾಡಿಗೆ ಅವಕಾಶ; ಅನಧಿಕೃತ ವ್ಯವಹಾರದ ಆತಂಕ: ಗ್ರಾಮಸ್ಥರ ವಿರೋಧ

Update: 2021-04-12 16:40 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಮೈಂದಡ್ಕವೆಂಬ ಜನವಸತಿಯಿಲ್ಲದ ನಿರ್ಜನ ಪ್ರದೇಶದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ತಳ್ಳುಗಾಡಿಗಳಿಗೆ ಅವಕಾಶ ನೀಡಲು ನಿರ್ಣಯ ಕೈಗೊಂಡಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ರಾಮಸ್ಥರ ನಿಯೋಗವೊಂದು 34 ನೆಕ್ಕಿಲಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ. ನಿರ್ಜನ ಪ್ರದೇಶವಾಗಿರುವ ಇಲ್ಲಿ ವ್ಯಾಪಾರಕ್ಕೆ ಅನುಮತಿ ನೀಡಿದರೆ ಮದ್ಯ, ಗಾಂಜಾ ಮಾರಾಟದಂತಹ ಅಕ್ರಮ ವ್ಯವಹಾರಗಳು ನಡೆದು, ಪರಿಸರದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೈಂದಡ್ಕ ಎನ್ನುವುದು ಗುಡ್ಡ, ಕಾಡುಗಳಿಂದ ಆವರಿಸಿದ ಪ್ರದೇಶವಾಗಿದೆ. ಇಲ್ಲಿ ಅಲ್ಲೊಂದು- ಇಲ್ಲೊಂದು ಮನೆಗಳು ಇರುವುದು ಬಿಟ್ಟರೆ ಇದು ಜನವಸತಿ ಪ್ರದೇಶವಲ್ಲ. ವ್ಯಾಪಾರ ಕೇಂದ್ರವೂ ಅಲ್ಲ. ಇಲ್ಲಿನ ಸರ್ವೆ ನಂಬರ್ 88/1 ರಲ್ಲಿ 0.55 ಎಕರೆ ಜಾಗದಲ್ಲಿ ಸಾರ್ವಜನಿಕ ಆಟದ ಮೈದಾನವಿದೆ. ಅಲ್ಲೇ ಪಕ್ಕದಲ್ಲಿ ಕ್ರೈಸ್ತ ಧರ್ಮೀಯರ ದಫನ ಭೂಮಿ ಇದೆ. ಈ ಮೊದಲು ಇಲ್ಲೊಂದು ಅನಧಿಕೃತ ಅಂಗಡಿಯಿದ್ದು ಅಲ್ಲಿ ಅನಧಿಕೃತ ಮದ್ಯ ಮಾರಾಟ, ಗಾಂಜಾ ಮಾರಾಟ ಮಾಡುವ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಅಲ್ಲದೇ, ಅಂಗಡಿಯಲ್ಲಿ ಬೀಡು ಬಿಡುವ ಪುಂಡು ಪೋಕರಿಗಳು ನಿರ್ಜನ ಪ್ರದೇಶದ ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಹೆಣ್ಮಕ್ಕಳಿಗೆ ಚುಡಾಯಿಸುವುದಲ್ಲದೆ, ಈ ಪ್ರದೇಶದಲ್ಲಿ ಸಾರ್ವಜನಿಕ ಶಾಂತಿಭಂಗಕ್ಕೂ ಕಾರಣವಾಗಿತ್ತು. ಬಳಿಕ ಈ ಅನಧಿಕೃತ ಅಂಗಡಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಇದೀಗ ಮತ್ತೆ 34 ನೆಕ್ಕಿಲಾಡಿ ಗ್ರಾ.ಪಂ. ಆಡಳಿತ ಇಲ್ಲಿ ತಳ್ಳು ಗಾಡಿಗಳಿಗೆ ಅವಕಾಶ ನೀಡಲು ನಿರ್ಣಯ ಕೈಗೊಂಡಿದ್ದು, ನಿರ್ಜನ ಪ್ರದೇಶವಾದ ಇಲ್ಲಿ ಮತ್ತೆ ಅಕ್ರಮ ಮದ್ಯ, ಗಾಂಜಾ ಮಾರಾಟವಾಗುವ ಸಂಭವವಿದೆ. ಇಲ್ಲಿನ ಸರ್ವೆ ನಂಬರ್ 88/1ರಲ್ಲಿ ಇಬ್ಬರೊಳಗೆ ಇದ್ದ ಜಾಗದ ಸಮಸ್ಯೆಯನ್ನು ನ್ಯಾಯಾಲಯವು ಬಗೆಹರಿಸಿದ್ದು, ಇದರಲ್ಲಿ 0.55 ಸೆಂಟ್ಸ್ ಜಾಗವನ್ನು ಸಾರ್ವಜನಿಕ ಮೈದಾನಕ್ಕೆ ಮೀಸಲಿಟ್ಟು ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಇದಕ್ಕೆ ಸೇರಿದ ಜಾಗವನ್ನು ಸಾರ್ವಜನಿಕ ಮೈದಾನವಾಗಿಯೇ ಉಪಯೋಗಿಸಿಕೊಳ್ಳಬೇಕೇ ಹೊರತು. ಇಲ್ಲಿ ತಳ್ಳು ಗಾಡಿಗಳನ್ನಿಟ್ಟು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದೆಯಲ್ಲದೆ, ಇಲ್ಲಿ ತಳ್ಳುಗಾಡಿಗಳಿಗೆ ಇಲ್ಲಿ ಅವಕಾಶ ನೀಡಿ ಪರಿಸರದ ನೆಮ್ಮದಿ ಕೆಡಿಸುವ ಕೆಲಸವಾದರೆ ಅದಕ್ಕೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದೆ.

ಮನವಿ ಸ್ವೀಕರಿಸಿದ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್., ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನಾ, ಪ್ರಭಾರ ಪಿಡಿಒ ಕುಮಾರಯ್ಯ ಉಪಸ್ಥಿತರಿದ್ದರು. ಮನವಿ ಸಲ್ಲಿಸಿದ ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತಸಂಘ (ಹಸಿರು ಸೇನೆ)ದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ಗ್ರಾಮಸ್ಥರಾದ ಅಬ್ದುರ್ರಹ್ಮಾನ್ ಯುನಿಕ್, ಶ್ರೀಮತಿ ಜಯಶೀಲ, ಶ್ರೀಮತಿ ಅನಿ ಮಿನೇಜಸ್, ಶ್ರೀಮತಿ ಕೈರುನ್ನೀಸಾ, ಖಲಂದರ್ ಶಾಫಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News