ಇಸ್ರೇಲ್‌ನಿಂದ ಪರಮಾಣು ಸ್ಥಾವರದಲ್ಲಿ ಬುಡಮೇಲು ಕೃತ್ಯ: ಇರಾನ್

Update: 2021-04-12 16:43 GMT

ಟೆಹರಾನ್ (ಇರಾನ್), ಎ. 12: ತನ್ನ ಪ್ರಮುಖ ಪರಮಾಣು ಸ್ಥಾವರ ನಟಾಂಝ್‌ನಲ್ಲಿ ನಡೆದಿರುವ ಬುಡಮೇಲು ಕೃತ್ಯಕ್ಕೆ ಪ್ರಾದೇಶಿಕ ಬದ್ಧವೈರಿ ಇಸ್ರೇಲ್ ಕಾರಣ ಎಂದು ಇರಾನ್ ಆರೋಪಿಸಿದೆ ಹಾಗೂ ಅದರ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದೆ.

ಇರಾನ್‌ನ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಸೋಮವಾರ ಸಂಸದರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಇರಾನ್‌ನ ಅಧಿಕೃತ ‘ನೂರ್‌ನ್ಯೂಸ್’ ವೆಬ್‌ಸೈಟ್ ವರದಿ ಮಾಡಿದೆ. ಭೂಗತ ಯುರೇನಿಯಂ ಸಂವರ್ಧನಾ ಸ್ಥಾವರದಲ್ಲಿರುವ ಉತ್ಪಾದನಾ ಕೊಠಡಿಗಳ ಪೈಕಿ ಒಂದರಲ್ಲಿ ವಿದ್ಯುತ್ ಅಡಚಣೆಯನ್ನು ಉಂಟು ಮಾಡಿರುವ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದು ಅದು ಹೇಳಿದೆ. ಅದು ವ್ಯಕ್ತಿಯ ವಿವರಗಳನ್ನು ಒದಗಿಸಿಲ್ಲ.

2015ರ ಇರಾನ್ ಪರಮಾಣು ಒಪ್ಪಂದಕ್ಕೆ ಮರುಜೀವ ನೀಡಲು ಇರಾನ್ ಮತ್ತು ಅಮೆರಿಕ ರಾಜತಾಂತ್ರಿಕ ಕ್ರಮಗಳನ್ನು ಆರಂಭಿಸಿರುವ ನಡುವೆಯೇ ಈ ಘಟನೆ ಸಂಭವಿಸಿದೆ. ಪ್ರಬಲ ದೇಶಗಳೊಂದಿಗೆ ಇರಾನ್ ಮಾಡಿಕೊಂಡಿರುವ ಪರಮಾಣು ಒಪ್ಪಂದವನ್ನು ಇಸ್ರೇಲ್ ತೀವ್ರವಾಗಿ ವಿರೋಧಿಸುತ್ತಿದೆ. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದಿಂದ ಅವೆುರಿಕವನ್ನು 2018ರಲ್ಲಿ ಹೊರಗೆ ತಂದಿದ್ದಾರೆ.

‘‘ಈ ವ್ಯಕ್ತಿಯನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’’ ಎಂದು ವೆಬ್‌ಸೈಟ್ ಹೇಳಿದೆ.

ಪರಮಾಣು ಒಪ್ಪಂದವನ್ನು ಉಳಿಸಿಕೊಳ್ಳುವುದಕ್ಕಾಗಿ ಕಳೆದ ವಾರ ಇರಾನ್ ಮತ್ತು ಜಾಗತಿಕ ಶಕ್ತ ರಾಷ್ಟ್ರಗಳು ವಿಯೆನ್ನಾದಲ್ಲಿ ಮಾತುಕತೆ ನಡೆಸಿದ್ದವು. ಮಾತುಕತೆ ‘ರಚನಾತ್ಮಕ’ವಾಗಿತ್ತು ಎಂದು ಆ ದೇಶಗಳು ಹೇಳಿವೆ. ಇದರ ನಡುವೆಯೇ, ಯುರೇನಿಯಂ ಸಂವರ್ಧನೆಯನ್ನು ವೃದ್ಧಿಸಲು ಸುಧಾರಿತ ಸೆಂಟಿಫ್ಯೂಜ್‌ಗಳನ್ನು ಬಳಸುವುದಾಗಿ ಇರಾನ್ ಘೋಷಿಸಿದೆ. ಇದು ಪರಮಾಣು ಒಪ್ಪಂದದ ಶರತ್ತುಗಳ ಉಲ್ಲಂಘನೆಯಾಗಿದೆ.

ಪರಮಾಣು ಭಯೋತ್ಪಾದನೆ: ಇರಾನ್ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಆರೋಪ

ಪರಮಾಣು ಸ್ಥಾವರದಲ್ಲಿ ನಡೆದಿರುವ ಬುಡಮೇಲು ಕೃತ್ಯವು ‘ಪರಮಾಣು ಭಯೋತ್ಪಾದನೆ’ಯಾಗಿದೆ ಎಂಬುದಾಗಿ ಇರಾನ್ ಪರಮಾಣು ಶಕ್ತಿ ಸಂಸ್ಥೆಯ ಮುಖ್ಯಸ್ಥ ಅಲಿ ಅಕ್ಬರ್ ಸಾಲಿಹಿ ರವಿವಾರ ಬಣ್ಣಿಸಿದ್ದಾರೆ.

ಇರಾನ್ ಮತ್ತು ಜಾಗತಿಕ ಶಕ್ತಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳ ವಿರೋಧಿಗಳು ಈ ಕೃತ್ಯ ನಡೆಸಿದ್ದಾರೆ ಎಂದ ಅವರು ಆರೋಪಿಸಿದ್ದಾರೆ.

ಇರಾನ್‌ನ ಪರಮಾಣು ಪ್ರಗತಿ ಮತ್ತು ವಿಯೆನ್ನಾದಲ್ಲಿ ನಡೆಯುತ್ತಿರುವ ಮಾತುಕತೆಯ ವಿರೋಧಿಗಳು ಈ ಕೃತ್ಯದ ಹಿಂದಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News