ಪುತ್ತೂರು ಎಸಿ ಕಚೇರಿ ಗೋಡೆಗೆ 'ವರ್ಲಿ'ಯ ಅಲಂಕಾರ

Update: 2021-04-13 11:58 GMT

ಪುತ್ತೂರು: ಭಾರತೀಯ ಕಲೆಯಲ್ಲಿ ಪಾರಂಪರಿಕ ಕಲೆ ಎಂದು ಹೆಸರಿಸಲಾದ ವರ್ಲಿ ಕಲೆಯಲ್ಲಿ ಪುತ್ತೂರು ಉಪವಿಭಾಗಾದ ಸಹಾಯಕ ಆಯುಕ್ತರ ಕಚೇರಿ ಇದೀಗ ಕಂಗೊಳಿಸುತ್ತಿದೆ. ಪುತ್ತೂರಿನ ಶಾಲಾ ಶಿಕ್ಷಕರ ತಂಡವೊಂದು ಪುತ್ತೂರಿನ ಎಸಿ ಕಚೇರಿಯನ್ನು ವರ್ಲಿ ಕಲೆಯ ಮೂಲಕ ಅಲಂಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಪುತ್ತೂರಿನ ಮಿನಿ ವಿಧಾನ ಸೌಧದ ಒಳಭಾಗದಲ್ಲಿನ ಮಹಡಿಯಲ್ಲಿರುವ ಪುತ್ತೂರು ಉಪವಿಭಾಗಾಧಿಯವರ ಕಚೇರಿಯಲ್ಲಿ ಪ್ರತಿದಿನ ಸಾರ್ವಜನಿಕರು ಹೆಚ್ಚಿರುತ್ತಾರೆ. ಉಪವಿಭಾಗದ ಈ ಕಚೇರಿಯು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ  ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರತಿಯೊಂದು ಕೆಲಸಕ್ಕೂ ಕಂದಾಯ ಇಲಾಖೆಯ ಈ ಪ್ರಮುಖ ಕಚೇರಿಗೆ ಸಾರ್ವಜನಿಕರು ಭೇಟಿ ನೀಡುತ್ತಿರುವುದು ಮಾಮೂಲಿಯಾಗಿದೆ. ಈ ನಿಟ್ಟಿನಲ್ಲಿ ಜನತೆಗೆ ಕಂದಾಯ ಇಲಾಖೆಯ ಮಾಹಿತಿಯನ್ನು ತಿಳಿಸಲು ವರ್ಲಿ ಕಲೆಯ ಮೊರೆಹೋಗುವ ಚಿಂತನೆ ಅಧಿಕಾರಿ ವರ್ಗದ್ದಾಗಿದೆ. ಇದಕ್ಕೆ ಪೂರಕವಾಗಿ ಪುತ್ತೂರು ಎಸಿ ಕಚೇರಿ ಗೋಡೆಗಳ ತುಂಬಾ ವರ್ಲಿ ಕಲೆ ಅರಳುತ್ತಿದೆ. ಶಿಕ್ಷಕರ ತಂಡ ಈ ವರ್ಲಿ ಕಲೆಯ ಮೂಲಕ ಗೋಡೆ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕಾಯಕ ನಡೆಸುತ್ತಿದೆ.

ತುಳುನಾಡಿನ ಕಂಬಳ, ಯಕ್ಷಗಾನ, ಆಟಿಕಳಂಜ ಸೇರಿದಂತೆ ಜಾನಪದೀಯ ತುಳು ಸಂಸ್ಕೃತಿಯನ್ನು ಗೋಡೆಗಳ ಮೇಲೆ ಕೆತ್ತುವ ಕಾಯಕ ಈಗಾಗಲೇ ಆರಂಭಗೊಂಡಿದೆ. ಸುಮಾರು 5 ದಿನಗಳ ಕಾಲ 10 ಶಿಕ್ಷಕರ ತಂಡ ಈ ಕಾಯಕಕ್ಕೆ ಮುಂದಾಗಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳು, ಮಳೆಕೊಯ್ಲು, ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಚಿತ್ರಗಳನ್ನೂ ವರ್ಲಿ ಕಲೆಯ ಮೂಲಕ ಮೂಡಿಸುವ ನಡೆಯಲಿದೆ.

ಪುತ್ತೂರಿನ 10 ಮಂದಿ ಪ್ರತಿಭಾನ್ವಿತ ಕಲಾ ಶಿಕ್ಷಕರು ಇರುವ ಈ ತಂಡದಲ್ಲಿ ಕಲಾ ಶಿಕ್ಷಕ ತಾರನಾಥ್ ಕೈರಂಗಳ ವಿಟ್ಲ ಅವರ ವಿನ್ಯಾಸದಲ್ಲಿ ಕಲಾಶಿಕ್ಷಕ ಶ್ರೀಕಾಂತ್ ನಾಯಕ್ ಕಂಬಳಕೋಡಿ ಅವರ ನೇತೃತ್ವದಲ್ಲಿ ಸುಭೋದ ಪ್ರೌಢ ಶಾಲೆಯ ಕಲಾ ಶಿಕ್ಷಕಿ ಶಾರದಾ, ಸಾಲ್ಮರ ಪ್ರೌಢಶಾಲಾ ಕಲಾ ಶಿಕ್ಷಕಿ ಜಯಲಕ್ಷ್ಮಿ, ಕೊಂಬೆಟ್ಟು ಕಲಾಶಿಕ್ಷಕ ಜಗನ್ನಾಥ್ ಅರಿಯಡ್ಕ, ಕೆಪಿಎಸ್ ಕುಂಬ್ರದ ಕಲಾಶಿಕ್ಷಕ ಪ್ರಕಾಶ್ ವಿಟ್ಲ, ಕೆಪಿಎಸ್ ಕೆಯ್ಯೂರು ಕಲಾಶಿಕ್ಷಕ ಎನ್.ಎಚ್,ಗೌಂಡಿ, ಸಾಂದೀಪನಿ ನರಿಮೊಗ್ರು ಕಲಾಶಿಕ್ಷಕ  ಸುಚೇತ್, ಮುಕ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚರಣ್ ಕುಮಾರ್, ಕೇಶವ ಮೊಟ್ಟೆತ್ತಡ್ಕ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸೌಂದರ್ಯದ ಜೊತೆಗೆ ಮಾಹಿತಿ
ಪುತ್ತೂರು ಎಸಿ ಕಚೇರಿಗೆ ದಿನಕ್ಕೆ ನೂರಾರು ಮಂದಿ ಬರುತ್ತಾರೆ. ಹೀಗೆ ಬಂದವರು ತಮ್ಮ ಸರದಿಗಾಗಿ ಕಾಯುತ್ತಾರೆ. ಈ ಸಂದರ್ಭದಲ್ಲಿ ಗೋಡೆಗಳ ಮೂಲಕ ಚಿತ್ರಿತವಾಗಿರುವ ಕಲೆ ಹಾಗೂ ಅದರಲ್ಲಿರುವ ಮಾಹಿತಿ ಗಮನಿಸುತ್ತಾರೆ. ಇದರಿಂದ ಸರ್ಕಾರಿ ಸೌಲಭ್ಯಗಳ ಮಾಹಿತಿಯೂ ಜನತೆಗೆ ದೊರೆಯುತ್ತದೆ. ಇದರೊಂದಿಗೆ ಎಸಿ ಕಚೇರಿಯ ಗೋಡೆ ಸೌಂದರ್ಯವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಸಹಕಾರದೊಂದಿಗೆ ವರ್ಲಿ ಕಲೆಯನ್ನು ಚಿತ್ರಿಸಲಾಗುತ್ತಿದೆ
-ಡಾ.ಯತೀಶ್ ಉಳ್ಳಾಲ್, ಉಪವಿಭಾಗಾಧಿಕಾರಿ ಪುತ್ತೂರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News