ಪುತ್ತೂರು: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

Update: 2021-04-14 12:30 GMT

 ಪುತ್ತೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಮೇರು ವ್ಯಕ್ತಿತ್ವವಾಗಿದ್ದು, ಅವರು ತನ್ನ ಶಿಕ್ಷಣದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮುಂದಿನ ಜನಾಂಗ ಹೇಗೆ ಬದುಕಬೇಕು ಎಂಬುದು ಸ್ಪಷ್ಟವಾಗಿದೆ. ಸಂವಿಧಾನದಲ್ಲಿ ಆದುನಿಕ ಸಮಾಜದ ಪರಿವರ್ತನೆಯ ಚಿಂತನೆಯಿದೆ. ನಾವೆಲ್ಲರೂ ಸಂವಿಧಾನದ ಅಡಿಯಲಿಲ ನಡೆಯುತ್ತಿರುವುದು ಅಂಬೇಡ್ಕರ್ ಹಿರಿಮೆಗೆ ಸಾಕ್ಷಿಯಾಗಿದೆ. ಸಂವಿಧಾನಕ್ಕೆ ಬದ್ಧರಾಗಿ ಭಾರತ ನಿರ್ಮಿಸೋಣ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ತಿಳಿಸಿದರು.

ಅವರು ಬುಧವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ ಡಾ. ಅಂಬೇಡ್ಕರ್ ಸಂವಿಧಾನ ರಚಿಸದಿದ್ದಲ್ಲಿ ನಾವೆಲ್ಲರೂ ಈ ಸ್ಥಾನಮಾನ ಪಡೆಯಲು ಸಾಧ್ಯವಿರಲಿಲ್ಲ. ಭಾರತದ ಸಂವಿಧಾನವು ವಿಶ್ವಕ್ಕೇ ಮಾದರಿಯಾಗಿದೆ. ಭಾರತ ಪ್ರಪಂಚದಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ನಮ್ಮ ಸಂವಿಧಾನ ಸಾರ್ವಕಾಲಿಕವಾಗಿದೆ. ಸಂವಿಧಾನದ ಚಿಂತನೆಯ ಅಡಿಯಲ್ಲಿ ಸರ್ವ ಸಮಾಜ ರೂಪುಗೊಂಡಿದೆ. ಸಂವಿಧಾನವನ್ನು ಭಾರತದಲ್ಲಿ ಭಗವದ್ಗೀತೆ, ಕುರಾನ್, ಬೈಬಲ್‍ಗಿಂತಲೂ ಶ್ರೇಷ್ಠವಾಗಿ ನೋಡಲಾಗುತ್ತಿದೆ ಎಂದರು.  
ವಿಶೇಷ ಉಪನ್ಯಾಸ ನೀಡಿದ ಉಪ್ಪಿನಂಗಡಿ ಸರ್ಕಾರಿ ಶಾಲೆಯ ಸಹಶಿಕ್ಷಕಿ ಹರೀಣಾಕ್ಷಿ ಅವರು ತನ್ನೊಂದಿಗೆ 14 ಡಾಕ್ಟರೇಟ್ ಹಾಗೂ ಬ್ಯಾರಿಸ್ಟರ್ ಪದವಿಯನ್ನು ಪಡೆದುಕೊಂಡಿರುವ ಡಾ. ಅಂಬೇಡ್ಕರ್ ಅವರ ಬದುಕು ಹಾಗೂ ಚಿಂತನೆಗಳು ಇಂದಿಗೂ ಪ್ರೇರಣಾದಾಯಕವಾಗಿದೆ. ಅವರ ಬದುಕಿನ ಅನುಭವವೇ ಸಂವಿಧಾನ ರಚನೆಗೆ ಪ್ರೇರಣೆಯಾಗಿದೆ ಎಂದರು. 
ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಡಿವೈಎಸ್‍ಪಿ ಡಾ. ಗಾನ ಪಿ ಕುಮಾರ್ ಮಾತನಾಡಿದರು. 
ಈ ಸಂದರ್ಭದಲ್ಲಿ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ವರ್ಲಿ ಚಿತ್ರೀಕರಣ ಮಾಡಿದ 10 ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. 
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ತಹಸೀಲ್ದಾರ್ ಟಿ. ರಮೇಶ್ ಬಾಬು, ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ನಗರಸಭಾ ಪೌರಾಯುಕ್ತೆ ರೂಪಾ ಟಿ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಗಾಯತ್ರಿ ಸಿ.ಹೆಚ್ ಉಪಸ್ಥಿತರಿದ್ದರು. 
ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಕೃಷ್ಣ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಶ್ರೀಶೈಲ ಒಡೆಯರ್ ವಂದಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News