×
Ad

ಉಡುಪಿ: ಶ್ರೀರಾಮ-ಹನುಮದುತ್ಸವಕ್ಕೆ ವಿದ್ಯುಕ್ತ ಚಾಲನೆ

Update: 2021-04-14 19:34 IST

 ಉಡುಪಿ, ಎ.14: ಉಡುಪಿ ಶ್ರೀಕೃಷ್ಣಮಠ ರಾಜಾಂಗಣದ ನರಸಿಂಹತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ 15 ದಿನಗಳ ಕಾಲ ನಡೆಯುವ ‘ಶ್ರೀರಾಮ ಹನುಮದುತ್ಸವ’ಕ್ಕೆ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶ ಪ್ರಿಯ ತೀರ್ಥ ಶ್ರೀಪಾದರು, ಅಷ್ಟಮಠಗಳ ಉಳಿದ ಸ್ವಾಮೀಜಿಗಳೊಂದಿಗೆ ಮಂಗಳವಾರ ಸಂಜೆ ವಿದ್ಯುಕ್ತ ಚಾಲನೆ ನೀಡಿದರು.

 ಈ ವೇಳೆ ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಹಿರಿಯ ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಪರ್ಯಾಯ ಅದಮಾರು ಮಠ ಮತ್ತು ಎಸ್‌ಎಂಎಸ್‌ಪಿ ಸಂಸ್ಕೃತ ಮಹಾಪಾಠಶಾಲೆ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಬಳಿಕ ನರಸಿಂಹತೀರ್ಥ ವೇದಿಕೆಯಲ್ಲಿ ಪರ್ಯಾಯ ಅದಮಾರು ಮಠದ ಹಿರಿಯ ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ರಾಮಾಯಣದ ‘ರಾಮ  ಹನುಮ’ ಪಾತ್ರದ ಕುರಿತು ಚಿಂತನೆ ನಡೆಸಿದರು. ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ‘ಮಧ್ವ ರಾಮಾಯಣದ’ ಚಿಂತನೆ ನಡೆಸಿದರೆ, ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸೀತಾ ಪಾತ್ರದ ಕುರಿತು ಚಿಂತನೆ ನಡೆಸಿದರು. ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅಂತಾರಾಷ್ಟ್ರೀಯ ಖ್ಯಾತಿಯ ಶಿಲ್ಪಕಲಾವಿದರಾದ ಎಂ.ರಾಮಮೂರ್ತಿ ಇವರನ್ನು ಸನ್ಮಾನಿಸಿದರು.

ಬುಧವಾರ ಸೌರಯುಗಾದಿಯ ಪ್ರಯುಕ್ತ ಸುವರ್ಣ ರಥೋತ್ಸವ ನಡೆಯಿತು. ಉತ್ಸವ ದಲ್ಲಿ ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥರು, ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥರು, ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರು ಹಾಗೂ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News