ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆಯನ್ನಾಗಿಸಲು ಅಂಬೇಡ್ಕರ್ ಪ್ರಸ್ತಾವಿಸಿದ್ದರು: ಸಿಜೆಐ ಎಸ್.ಎ.ಬೋಬ್ಡೆ

Update: 2021-04-14 14:56 GMT

ನಾಗ್ಪುರ (ಮಹಾರಾಷ್ಟ್ರ),ಎ.14: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿವಿದ್ದರಿಂದ ಹಾಗೂ ಜನತೆ ಏನನ್ನು ಬಯಸಿದ್ದಾರೆ ಎನ್ನುವುದು ಗೊತ್ತಿದ್ದರಿಂದ ಸಂಸ್ಕೃತವನ್ನು ಭಾರತದ ಅಧಿಕೃತ ರಾಷ್ಟ್ರೀಯ ಭಾಷೆಯನ್ನಾಗಿಸುವ ಬಗ್ಗೆ ಅವರು ಪ್ರಸ್ತಾವಿಸಿದ್ದರು ಎಂದು ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ಅವರು ಬುಧವಾರ ಹೇಳಿದರು.

ಇಲ್ಲಿ ಮಹಾರಾಷ್ಟ್ರ ಕಾನೂನು ವಿವಿಯ ಶೈಕ್ಷಣಿಕ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ನ್ಯಾಯ ವ್ಯವಸ್ಥೆಯು ಬ್ರಿಟಿಷ್‌ರ ಬಳುವಳಿಯಾಗಿದ್ದು,ತರ್ಕ ಮತ್ತು ಅರಿಸ್ಟಾಟಲ್‌ನ ಮೂಲತರ್ಕವನ್ನು ಬಳಸುತ್ತಿದೆ. ಪ್ರಾಚೀನ ಭಾರತೀಯ ಗ್ರಂಥ ‘ನ್ಯಾಯಶಾಸ್ತ್ರ’ವು ಅರಿಸ್ಟಾಟಲ್ ಮತ್ತು ಪರ್ಷಿಯನ್ ತರ್ಕ ವ್ಯವಸ್ಥೆಗಿಂತ ಎಳ್ಳಷ್ಟೂ ಕಡಿಮೆಯಿಲ್ಲ ಮತ್ತು ನಮ್ಮ ಪೂರ್ವಜರ ಅಸಾಧಾರಣ ಪ್ರತಿಭೆಯನ್ನು ನಾವೇಕೆ ಕಡೆಗಣಿಸಬೇಕು ಮತ್ತು ಅದರ ಲಾಭವನ್ನೇಕೆ ಪಡೆಯಬಾರದು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ ಎಂದೂ ಹೇಳಿದರು.

ಅಂಬೇಡ್ಕರ್ ಅವರ 130ನೇ ಜನ್ಮದಿನದಂದು ಅವರನ್ನು ಸ್ಮರಿಸಿದ ನ್ಯಾ.ಬೋಬ್ಡೆ,ತಾನು ಇಂದು ಬೆಳಿಗ್ಗೆ ಕಾರ್ಯಕ್ರಮದಲ್ಲಿ ಯಾವ ಭಾಷೆಯಲ್ಲಿ ಭಾಷಣ ಮಾಡಬೇಕು ಎಂಬ ಗೊಂದಲದಲ್ಲಿದ್ದೆ. ಮಾತನಾಡುವಾಗ ಬಳಸುವ ಭಾಷೆ ಮತ್ತು ಕೆಲಸದ ಸಮಯದಲ್ಲಿ ಬಳಸುವ ಭಾಷೆಯ ನಡುವಿನ ಸಂಘರ್ಷ ತುಂಬ ಹಳೆಯದು ಎನ್ನುವುದನ್ನು ಅಂಬೇಡ್ಕರ್ ಜನ್ಮದಿನವು ತನಗೆ ನೆನಪಿಸಿದೆ. ಅಧೀನ ನ್ಯಾಯಾಲಯಗಳಲ್ಲಿ ಯಾವ ಭಾಷೆಯಿರಬೇಕು ಎಂಬ ಬಗ್ಗೆ ಹಲವಾರು ಅಹವಾಲುಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿರುತ್ತವೆ,ಆದರೆ ಈ ವಿಷಯದತ್ತ ಗಮನ ಹರಿಸಲಾಗಿಲ್ಲ ಎಂದು ತಾನು ಭಾವಿಸಿದ್ದೇನೆ. ಆದರೆ ಅಂಬೇಡ್ಕರ್ ಅವರು ಈ ವಿಷಯವನ್ನು ಮುಂಗಂಡಿದ್ದರು ಮತ್ತು ಸಂಸ್ಕೃತವು ಭಾರತದ ಅಧಿಕೃತ ಭಾಷೆಯಾಗಬೇಕು ಎಂಬ ಪ್ರಸ್ತಾವವನ್ನು ಮುಂದಿರಿಸಿದ್ದರು. ಆದರೆ ಅಂಬೇಡ್ಕರ್ ಜೊತೆಗೆ ಕೆಲವು ಮೌಲ್ವಿಗಳು, ಪಂಡಿತರು, ಅರ್ಚಕರ ಸಹಿಗಳನ್ನು ಹೊಂದಿದ್ದ ಈ ಪ್ರಸ್ತಾವ ಸಂವಿಧಾನ ಸಭೆಯಲ್ಲಿ ಮಂಡನೆಯಾಗಿತ್ತೇ ಎನ್ನುವುದು ತನಗೆ ನೆನಪಿಲ್ಲ ಎಂದರು.

ತಮಿಳು ಭಾಷೆಯನ್ನು ಉತ್ತರ ಭಾರತೀಯರು ಸ್ವೀಕರಿಸುವುದಿಲ್ಲ. ಹಿಂದಿಯನ್ನು ದಕ್ಷಿಣ ಭಾರತದವರು ಒಪ್ಪಿಕೊಳ್ಳುವುದಿಲ್ಲ. ಆದರೆ ಸಂಸ್ಕೃತಕ್ಕೆ ಉತ್ತರ ಭಾರತ ಅಥವಾ ದಕ್ಷಿಣ ಭಾರತದಲ್ಲಿ ವಿರೋಧ ಎದುರಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಅವರು ಈ ಪ್ರಸ್ತಾವವನ್ನಿರಿಸಿದ್ದರು, ಆದರೆ ಅದು ಯಶಸ್ವಿಯಾಗಲಿಲ್ಲ ಎಂದ ನ್ಯಾ.ಬೋಬ್ಡೆ,ಅಂಬೇಡ್ಕರ್ ಕಾನೂನಿನ ಜ್ಞಾನ ಹೊಂದಿದ್ದು ಮಾತ್ರವಲ,ಅವರಿಗೆ ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳೂ ಚೆನ್ನಾಗಿ ತಿಳಿದಿದ್ದವು. ದೇಶದ ಬಡಜನರಿಗೆ  ಏನು ಬೇಕು ಎನ್ನುವುದು ಅವರಿಗೆ ಗೊತ್ತಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಅವರಿಗೆ ಸಂಪೂರ್ಣ ಜ್ಞಾನವಿತ್ತು ಮತ್ತು ಇದೇ ಕಾರಣದಿಂದ ಈ ಅವರು ಪ್ರಸ್ತಾವವನ್ನು ಮಂದಿರಿಸಲು ಯೋಚಿಸಿದ್ದರು ಎಂದು ತಾನು ಭಾವಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News