‘ಎವರ್ ಗಿವನ್’ನಿಂದ 900 ಮಿಲಿಯ ಡಾ. ಪರಿಹಾರ ಕೋರಿದ ಸೂಯೆಝ್ ಪ್ರಾಧಿಕಾರ

Update: 2021-04-14 15:24 GMT

ಕೈರೋ (ಈಜಿಪ್ಟ್), ಎ. 14: ಸುಮಾರು ಒಂದು ವಾರ ಕಾಲ ಸೂಯೆಝ್ ಕಾಲುವೆಯಲ್ಲಿ ಅಡ್ಡಕ್ಕೆ ಸಿಕ್ಕಿಹಾಕಿಕೊಂಡು ಸರಕು ಹಡಗುಗಳ ಸಂಚಾರವನ್ನು ತಡೆಹಿಡಿದ ದೈತ್ಯ ಹಡಗು ‘ಎವರ್ ಗಿವನ್’ನ ಮಾಲೀಕರು 900 ಮಿಲಿಯ ಡಾಲರ್ (ಸುಮಾರು 6,760 ಕೋಟಿ ರೂಪಾಯಿ) ಪರಿಹಾರ ನೀಡಬೇಕು ಎಂದು ಸೂಯೆಝ್ ಕಾಲುವೆ ಪ್ರಾಧಿಕಾರದ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಅದೇ ವೇಳೆ, ಹಡಗು ಕಂಪೆನಿಯು ಪರಿಹಾರ ನೀಡುವವರೆಗೆ, ನ್ಯಾಯಾಲಯದ ಆದೇಶದಂತೆ ಹಡಗನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

2 ಲಕ್ಷ ಟನ್ ಭಾರದ ಹಡಗು ಸೂಯೆಝ್ ಕಾಲುವೆಯಲ್ಲಿ ಸಾಗುತ್ತಿದ್ದಾಗ ಮಾರ್ಚ್ 23ರಂದು ಬಿರುಗಾಳಿಗೆ ಸಿಲುಕಿ ಅಡ್ಡಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಬಿಡಿಸಲು ಆರು ದಿನಗಳ ನಿರಂತರ ಪ್ರಯತ್ನಗಳು ನಡೆದಿದ್ದವು.

ಇದರಿಂದಾಗಿ ಪ್ರತಿದಿನ ಯುರೋಪ್ ಮತ್ತು ಏಶ್ಯ ನಡುವೆ ಸಾಗುವ 9.6 ಬಿಲಿಯ ಡಾಲರ್ (ಸುಮಾರು 72,130 ಕೋಟಿ ರೂಪಾಯಿ) ಮೌಲ್ಯದ ಸರಕು ಬಾಕಿಯಾಗಿತ್ತು ಎಂದು ಸಮುದ್ರಯಾನ ದತ್ತಾಂಶ ಕಂಪೆನಿ ‘ಲಾಯ್ಡ್ಸಾ ಲಿಸ್ಟ್’ ಹೇಳಿದೆ. ಅದೂ ಅಲ್ಲದೆ, ಈ ಅವಧಿಯಲ್ಲಿ, ಕಾಲುವೆಯ ಬಳಕೆಗಾಗಿ ಈಜಿಪ್ಟ್‌ಗೆ ಪತಿ ದಿನ ಬರಬೇಕಾಗಿದ್ದ 12 (ಸುಮಾರು 90 ಕೋಟಿ ರೂಪಾಯಿ)ರಿಂದ 15 ಮಿಲಿಯ ಡಾಲರ್ (ಸುಮಾರು 113 ಕೋಟಿ ರೂಪಾಯಿ) ವರಮಾನವೂ ನಷ್ಟವಾಗಿದೆ.

900 ಮಿಲಿಯ ಡಾಲರ್ ಪರಿಹಾರ ನೀಡಲು ಹಡಗು ಕಂಪೆನಿಯು ವಿಫಲವಾಗಿರುವುದರಿಂದ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೂಯೆಝ್ ಕಾಲುವೆ ಪ್ರಾಧಿಕಾರದ ಅಧ್ಯಕ್ಷ ಉಸಾಮ ರಾಬಿಈ ಹೇಳಿರುವುದಾಗಿ ಈಜಿಪ್ಟ್‌ನ ಸರಕಾರಿ ಒಡೆತನದ ಪತ್ರಿಕೆ ‘ಅಲ್-ಅಹ್ರಮ್’ ವರದಿ ಮಾಡಿದೆ.

ನ್ಯಾಯಾಲಯಕ್ಕೆ ಹೋಗುವ ಇಂಗಿತ ವ್ಯಕ್ತಪಡಿಸಿದ ಹಡಗು ಕಂಪೆನಿ

‘ಎಂವಿ ಎವರ್ ಗಿವನ್’ ಹಡಗು ಸೂಯೆಝ್ ಕಾಲುವೆಯನ್ನು ಆರು ದಿನಗಳ ಕಾಲ ತಡೆದಿರುವುದಕ್ಕಾಗಿ 900 ಮಿಲಿಯ ಡಾಲರ್ ಪರಿಹಾರ ಕೋರಿರುವ ವಿಚಾರದಲ್ಲಿ ಈಜಿಪ್ಟ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹಡಗಿನ ಜಪಾನ್ ಮಾಲೀಕರು ಹೇಳಿದ್ದಾರೆ.

‘‘ಹಡಗಿನ ಹಣೆಬರಹ ಇನ್ನು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳಬೇಕಾಗಿದೆ’’ ಎಂದು ಹಡಗಿನ ಮಾಲೀಕ ಕಂಪೆನಿಯ ವಕ್ತಾರೆಯೊಬ್ಬರು ಬುಧವಾರ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News