ಬೆಳ್ತಂಗಡಿ: ಭಾರೀ ಮಳೆಗೆ ಅಪಾರ ಹಾನಿ

Update: 2021-04-14 16:19 GMT

ಬೆಳ್ತಂಗಡಿ; ತಾಲೂಕಿನಾಧ್ಯಂತ ಬುಧವಾರ ಸಂಜೆ ಬಾರೀ ಗಾಳಿ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದಿದ್ದು ಗೇರುಕಟ್ಟೆ ಪರಿಸರದಲ್ಲಿ ಭಾರೀ ಹಾನಿ ಸಂಭವಿಸಿದೆ. ಗೇರುಕಟ್ಟೆ ಪೇಟೆಯಲ್ಲಿರುವ ಸತೀಶ್ ಸಾಲಿಯಾನ್ ಅವರ ಮಾಲಕತ್ವ ಕಟ್ಟಡದ ಹೆಂಚುಗಳು ಹಾರಿ ಹೋಗಿದೆ. 
ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಬಲವಾದ ಗಾಳಿ ಬೀಸಿದೆ. ಈ ಕಟ್ಟಡದಲ್ಲಿ ಕೋಣೆಗಳನ್ನು  ಸೆಲೂನ್, ವೆಲ್ಡಿಂಗ್ ವರ್ಕ್ ಶಾಫ್, ಕೋಳಿ ಅಂಗಡಿ ಬಾಡಿಗೆ ನೀಡಲಾಗಿದೆ. ಎಲ್ಲ ಅಂಗಡಿಗಳ ಹೆಂಚು ಹಾರಿ ಹೋಗಿದ್ದು,  ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ಕಳಿಯ ಗ್ರಾಮದಲ್ಲಿ ಹಲವಾರು ಮಂದಿಯ ತೋಟಕ್ಕೂ ಹಾನಿಯಾಗಿದೆ. 
ಓಡಿಲ್ನಾಳ ಗ್ರಾಮದ ಅಶ್ವಥ್ ನಗರದಿಂದ ಕಟ್ಟದಬೈಲ್ ತನಕ ರಸ್ತೆ ಬದಿಯಲ್ಲಿದ್ದ ಸುಮಾರು 20 ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 

ಅಶ್ವಥ್ ನಗರದಲ್ಲಿ 2 ಮನೆಗಳು, ಕಟ್ಟದಬೈಲಿನಲ್ಲಿ 4  ಮನೆಗಳು ಹಾಗೂ 2 ಹಟ್ಟಿಗಳಿಗೆ ಹಾನಿಯಾಗಿದೆ. ಅಲ್ಲದೆ ಈ ಭಾಗದ ತೋಟಗಳಿಗೂ ಗಾಳಿಯಿಂದಾಗಿ ಹಾನಿ ಸಂಭವಿಸಿದೆ. 
ಗ್ರಾಮಕರಣಿಕ ರವಿ ಅವರು ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಗಾಳಿಯಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ಕಂಬ ತೆರವು ಕಾರ್ಯ ನಡೆಯುತ್ತಿದೆ. 
ಸ್ಥಳೀಯ ಗ್ರಾ.ಪಂ. ಜನಪ್ರತಿನಿಧಿಗಳು ಭೇಟಿ‌ ನೀಡಿದ್ದಾರೆ. ಸ್ಥಳೀಯರು ತೆರವು ಕಾರ್ಯದಲ್ಲಿ ಸಹಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News