ಬೈಡನ್ ಆಡಳಿತ ಯಂತ್ರಕ್ಕೆ ಮತ್ತಿಬ್ಬರು ಭಾರತೀಯ ಮೂಲದ ಮಹಿಳೆಯರು

Update: 2021-04-15 04:07 GMT
Image credit: linkedin.com/in/meeracjoshi, linkedin.com/in/radhika-fox

ವಾಷಿಂಗ್ಟನ್, ಎ.15: ಅಮೆರಿಕದ ಅತ್ಯುನ್ನತ ಅಟಾರ್ನಿ ಮತ್ತು ಕಾರ್ಯಾಂಗದ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ಇಬ್ಬರನ್ನು ನೇಮಕ ಮಾಡುವ ಇಂಗಿತವನ್ನು ಅಧ್ಯಕ್ಷ ಜೋ ಬೈಡನ್ ವ್ಯಕ್ತಪಡಿಸಿದ್ದಾರೆ.

ಬೈಡನ್ ಅಧ್ಯಕ್ಷಾವಧಿ ಆರಂಭದ ದಿನವೇ ಅಂದರೆ ಜನವರಿ 20ರಂದು ಆಡಳಿತ ಸೇವೆ ಸೇರಿದ್ದ ಮೀರಾ ಜೋಶಿ ಹಾಗೂ ರಾಧಿಕಾ ಫೋಕ್ಸ್ ಅವರನ್ನು ಈ ಹುದ್ದೆಗಳಿಗೆ ನಾಮಕರಣ ಮಾಡಿರುವುದನ್ನು ಬೈಡನ್ ಘೋಷಿಸಿದ್ದಾರೆ.

ಮೀರಾ ಜೋಶಿಯವರನ್ನು ಅಮೆರಿಕದ ಸಾರಿಗೆ ಇಲಾಖೆಯ ಫೆಡರಲ್ ಮೋಟರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್‌ನ ಆಡಳಿತಾಧಿಕಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ. ಅಂತೆಯೇ ಫೋಕ್ಸ್ ಅವರನ್ನು ನೀರು, ಪರಿಸರ ಸಂರಕ್ಷಣೆ ಏಜೆನ್ಸಿಯ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ಶ್ವೇತಭವನದ ಪ್ರಕಟನೆ ಹೇಳಿದೆ.

ಇದಕ್ಕೂ ಮುನ್ನ ಮೀರಾ ಜೋಶಿಯವರನ್ನು ಫೆಡರಲ್ ಮೋಟರ್ ಕ್ಯಾರಿಯರ್ ಸೇಫ್ಟಿ ಅಡ್ಮಿನಿಸ್ಟ್ರೇಷನ್‌ನ ಉಪ ಆಡಳಿತಾಧಿಕಾರಿಯಾಗಿ ಬೈಡನ್ ಜನವರಿ 20ರಂದು ನೇಮಕ ಮಾಡಿದ್ದರು. ಅದೇ ದಿನ ಫೋಕ್ಸ್ ಅವರನ್ನು ನೀರು ಮತ್ತು ಪರಿಸರ ಸಂರಕ್ಷಣೆ ಏಜೆನ್ಸಿಯ ಪ್ರಧಾನ ಉಪ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಿಸಿದ್ದರು.

ಫೈಸಲ್ ಅಮಿನ್ ಅವರನ್ನು ಪರಿಸರ ಸಂರಕ್ಷಣಾ ಏಜೆನ್ಸಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಕ ಮಾಡಲೂ ಬೈಡನ್ ಮುಂದಾಗಿದ್ದಾರೆ. ಹವಾಮಾನ ಮತ್ತು ಸಾರಿಗೆ ಕ್ಷೇತ್ರವನ್ನು ಮುನ್ನಡೆಸಲು 12 ಮಂದಿ ಉನ್ನತ ಅಧಿಕಾರಿಗಳನ್ನು ನೇಮಕ ಮಾಡುವುದಾಗಿ ಬೈಡನ್ ಘೋಷಿಸಿದ ಬೆನ್ನಲ್ಲೇ ಮೂವರ ಹೆಸರು ಪ್ರಕಟಿಸಲಾಗಿದೆ. ಅಟಾರ್ನಿ ಆಗಿರುವ ಜೋಶಿ ಸರಕಾರದ ಮೇಲ್ವಿಚಾರಣಾ ಸಂಸ್ಥೆಗಳಲ್ಲಿ 16 ವರ್ಷಗಳ ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News