ಈ ರಾಜ್ಯದಲ್ಲಿ ಕಸ ಒಯ್ಯುವ ವಾಹನ ಶವಸಾಗಾಟಕ್ಕೆ; ಪ್ರೆಸ್‌ಕ್ಲಬ್ ಈಗ ಕೋವಿಡ್ ಚಿಕಿತ್ಸಾ ಕೇಂದ್ರ!

Update: 2021-04-15 04:39 GMT
Photo source: NDTV

ರಾಜನಂದಗಾವ್ (ಛತ್ತೀಸ್‌ಗಢ), ಎ.15: ಛತ್ತೀಸ್‌ಗಢದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶವ ವಿಲೇವಾರಿಗೆ ಭಾರಿ ಸಮಸ್ಯೆ ಎದುರಾಗಿದ್ದು, ಕಸ ಒಯ್ಯುವ ವಾಹನಗಳನ್ನು ಶವಸಾಗಾಟಕ್ಕೆ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜನಂದಗಾಂವ್‌ನಲ್ಲಿ ಪೂರ್ಣ ಪಿಪಿಇ ಕಿಟ್‌ಗಳನ್ನು ಧರಿಸಿರುವ ನೈರ್ಮಲ್ಯ ಕಾರ್ಮಿಕರು ಕೋವಿಡ್-19 ಸೋಂಕಿತರ ಮೃತದೇಹಗಳನ್ನು ಎತ್ತಿ ಹಾಕಿ ಕಸ ಸಾಗಾಟ ವಾಹನದಲ್ಲಿ ಸ್ಮಶಾನಕ್ಕೆ ಒಯ್ಯುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಘಟನೆ ಬಗ್ಗೆ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿಯವರ ಗಮನಸೆಳೆದಾಗ, "ವಾಹನಗಳನ್ನು ವ್ಯವಸ್ಥೆ ಮಾಡುವುದು ನಗರ ಪಂಚಾಯ್ತಿ ಮತ್ತು ಸಿಎಂಓ ಜವಾಬ್ದಾರಿ" ಎಂದು ಪ್ರತಿಕ್ರಿಯಿಸಿದರು.

ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪ್ರೆಸ್‌ಕ್ಲಬ್ ಕೂಡಾ ಇದೀಗ ಕೋವಿಡ್-19 ಚಿಕಿತ್ಸಾ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರೆಸ್‌ಕ್ಲಬ್‌ನಲ್ಲಿ 30 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ರೋಗಲಕ್ಷಣ ಇಲ್ಲದ, ಆದರೆ ವೈದ್ಯಕೀಯ ನೆರವು ಅಗತ್ಯವಿರುವ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಜ್ಞ ವೈದ್ಯರ ಸೇವೆ ದಿನದ 24 ಗಂಟೆಯೂ ಇಲ್ಲಿ ಲಭ್ಯ ಎಂದು ಪ್ರೆಸ್‌ಕ್ಲಬ್ ನಿರ್ದೇಶಕ ಅಜಯ್ ಸೋನಿ ಹೇಳಿದ್ದಾರೆ.

ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿರುವ 10 ರಾಜ್ಯಗಳ ಪೈಕಿ ಒಂದಾಗಿರುವ ಛತ್ತೀಸ್‌ಗಢದಲ್ಲಿ ಆರೋಗ್ಯ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದ್ದು, ಹೆಚ್ಚುತ್ತಿರುವ ಪ್ರಕರಣಗಳನ್ನು ನಿಭಾಯಿಸಲು ಹರಸಾಹಸ ಮಾಡಲಾಗುತ್ತಿದೆ.

ಬುಧವಾರ ರಾಜ್ಯದಲ್ಲಿ 14,250 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, 120 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,86,244ಕ್ಕೇರಿದ್ದು, ಸಾವಿನ ಸಂಖ್ಯೆಯೇ 5,307ಕ್ಕೆ ಹೆಚ್ಚಿದೆ. ಕಳೆದ ಒಂದು ತಿಂಗಳಲ್ಲಿ ರಾಜ್ಯದಲ್ಲಿ 1.68 ಲಕ್ಷ ಪ್ರಕರಣಗಳು ವರದಿಯಾಗಿದ್ದು, 1,417 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News