ರಮಝಾನ್ ಸಮಯದಲ್ಲಿ ನಿಝಾಮುದ್ದೀನ್ ಮರ್ಕಝ್ ನಲ್ಲಿ 50 ಜನರು ನಮಾಝ್ ಮಾಡಬಹುದು: ದಿಲ್ಲಿ ಹೈಕೋರ್ಟ್

Update: 2021-04-15 17:04 GMT

ಹೊಸದಿಲ್ಲಿ,ಎ.15: ಇಲ್ಲಿಯ ನಿಝಾಮುದ್ದೀನ್ ಮರ್ಕಝ್ ನಲ್ಲಿ ರಮಝಾನ್ ಸಂದರ್ಭದಲ್ಲಿ 50 ಜನರಿಗೆ ದಿನಕ್ಕೆ ಐದು ಬಾರಿ ನಮಾಝ್ ಸಲ್ಲಿಸಲು ಅವಕಾಶವನ್ನು ನೀಡಲಾಗುವುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಗುರುವಾರ ತಿಳಿಸಿದೆ. ಮಸ್ಜಿದ್ ಬಂಗ್ಲೆ ವಾಲಿಯ ಮೊದಲ ಅಂತಸ್ತಿನಲ್ಲಿ ಮಾತ್ರ ನಮಾಝ್ ಗೆ 50 ಜನರಿಗೆ ಪ್ರವೇಶಾವಕಾಶವನ್ನು ಕಲ್ಪಿಸುವಂತೆ ನ್ಯಾ.ಪ್ರತಿಭಾ ಎಂ.ಸಿಂಗ್ ಅವರು ನಿಝಾಮುದ್ದೀನ್ ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶ ನೀಡಿದರು.
 
ದಿಲ್ಲಿ ವಕ್ಫ್ ಮಂಡಳಿಯ ಪರ ಹಿರಿಯ ನ್ಯಾಯವಾದಿ ರಮೇಶ ಗುಪ್ತಾ ಅವರು ನಮಾಝ್ ನಲ್ಲಿ ಪಾಲ್ಗೊಳ್ಳುವ ಜನರ ಸಂಖ್ಯೆಯನ್ನು ಹೆಚ್ಚಿಸುವಂತೆ ಮತ್ತು ಮಸೀದಿಯ ಇತರ ಅಂತಸ್ತುಗಳ ಬಳಕೆಗೂ ಅವಕಾಶ ನೀಡುವಂತೆ ಮಾಡಿಕೊಂಡ ಕೋರಿಕೆಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿತಾದರೂ,ಈ ಬಗ್ಗೆ ನಿಝಾಮುದ್ದೀನ್ ಠಾಣಾಧಿಕಾರಿಗೆ ಅರ್ಜಿ ಸಲ್ಲಿಸಲು ಮಂಡಳಿಗೆ ಅವಕಾಶ ನೀಡಿತು. ಠಾಣಾಧಿಕಾರಿಗಳು ಕಾನೂನಿಗೆ ಅನುಗುಣವಾಗಿ ಅರ್ಜಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದೂ ಅದು ತಿಳಿಸಿತು.

ದಿಲ್ಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತನ್ನ ಆದೇಶವು ದಿಲ್ಲಿ ವಿಪತ್ತು ನಿರ್ವಹಣಾ ಮಂಡಳಿಯು ಹೊರಡಿಸುವ ಯಾವುದೇ ಅಧಿಸೂಚನೆಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News