ಉಡುಪಿ ಜಿಲ್ಲೆಯಲ್ಲಿ ಐಸಿಯು ಬೆಡ್‌, ವ್ಯಾಕ್ಸಿನ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2021-04-15 13:04 GMT

ಉಡುಪಿ, ಎ.15: ಜಿಲ್ಲೆಯಲ್ಲಿ ಒಟ್ಟು 436 ಸಕ್ರಿಯ ಕೊರೋನ ಪ್ರಕರಣಗಳಿದ್ದು, 82 ಮಂದಿ ಆಸ್ಪತ್ರೆಯಲ್ಲಿ ಮತ್ತು 354 ಮಂದಿ ಹೋಮ್ ಐಸೋಲೆಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 90 ಐಸಿಯು ಬೆಡ್‌ಗಳಿದ್ದು, ಅದರಲ್ಲಿ 10 ಬೆಡ್‌ಗಳು ಮಾತ್ರ ಭರ್ತಿಯಾಗಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮಣಿಪಾಲ ಕೆಎಂಸಿಯಲ್ಲಿ ಐಸಿಯು ಬೆಡ್‌ಗಳು ಭರ್ತಿ ಆಗಿರುವುದು ಬೇರೆ ಕಾಯಿಲೆ ರೋಗಿಗಳಿಂದಲೇ ಹೊರತು ಕೊರೋನದಿಂದಲ್ಲ. ಕೊರೋನ ಸಂಬಂಧ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಶೇ.20 ಮತ್ತು ಸರಕಾರಿ ಆಸ್ಪತ್ರೆ ಶೇ.50ರಷ್ಟು ಬೆಡ್‌ಗಳನ್ನು ಕಡ್ಡಾಯವಾಗಿ ಕಾಯ್ದಿರಿಸಲು ಈಗಾಲೇ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 55 ವೆಂಟಿಲೇಟರ್‌ಗಳಿದ್ದು, ಅದರಲ್ಲಿ 2 ಮಾತ್ರ, ಎಚ್‌ಎಫ್‌ಎನ್‌ಸಿ 35ರಲ್ಲಿ ನಾಲ್ಕು ಮಾತ್ರ ಬಳಕೆ ಆಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ 480 ಆಕ್ಸಿಜನ್ ಬೆಡ್‌ಗಳಲ್ಲಿ ಕೇವಲ ನಾಲ್ಕು ಬೆಡ್ ಮಾತ್ರ ಭರ್ತಿಯಾಗಿದೆ. ಜಿಲ್ಲೆಯಲ್ಲಿ ಶೇ.95 ಮಂದಿ ಲಕ್ಷಣಗಳಿದ್ದವರಿದ್ದಾರೆ. ಇಂತವರನ್ನು ಗುರುತಿಸಲು ಹೆಚ್ಚೆಚ್ಚು ಪರೀಕ್ಷೆಗೆ ಮಾಡಲಾಗುತ್ತಿದ್ದು, ಅದಕ್ಕಾಗಿ 50ಕ್ಕೂ ಹೆಚ್ಚು ಸ್ವಾಬ್ ಸಂಗ್ರಹಿಸುವರನ್ನು ನೇಮಕ ಮಾಡಿ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಕೊರೋನ ಪರೀಕ್ಷಿಸಲಾದ 34,900 ಮಂದಿಯಲ್ಲಿ 1101(ಪಾಸಿಟಿವಿಟಿ ಪ್ರಮಾಣ ಶೇ.15) ಪಾಸಿಟಿವ್, ಕಳೆದ 7 ದಿನಗಳಲ್ಲಿ ಪರೀಕ್ಷಿಸಿದ 15,000 ಮಂದಿಯಲ್ಲಿ 567(ಶೇ.3.14)ಪಾಸಿಟಿವ್, ಕಳೆದ ಮೂರು ದಿನಗಳಲ್ಲಿ ಪರೀಕ್ಷಿಸಿದ 7383 ಮಂದಿಯಲ್ಲಿ 236(ಶೇ.3.19) ಪಾಸಿಟಿವ್ ದೃಢಪಟ್ಟಿದೆ. ಇದನ್ನು ತುಲನೆ ಮಾಡಿದಾಗ ಕಳೆದ 15 ದಿನಗಳಿಂದ ಪಾಸಿಟಿವಿಟಿ ಪ್ರಮಾಣ ಒಂದೇ ರೀತಿಯಲ್ಲಿದ್ದು, ಯಾವುದೇ ಏರಿಕೆಯಾಗಿಲ್ಲ. ಕಳೆದ 2-3 ದಿನಗಳಲ್ಲಿ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ವ್ಯಾಕ್ಸಿನ್ ಕೊರತೆ ಇಲ್ಲ: ಡಿಸಿ
ನಮ್ಮಲ್ಲಿ ವ್ಯಾಕ್ಸಿನ್ ಕೊರತೆ ಇಲ್ಲ. ಲಸಿಕೆ ನೀಡುವ ಸಿಬ್ಬಂದಿಗಳ ಕೊರತೆ ಕೂಡ ನಮ್ಮಲ್ಲಿ ಇಲ್ಲ. ಜಿಲ್ಲೆಯಲ್ಲಿ ಎರಡನೇ ಬಾರಿ ಕೊರೋನ ಪಾಸಿಟಿವ್ ಬಂದಿರುವ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಹೋಮ್ ಐಸೋ ಲೇಷನ್‌ನಲ್ಲಿರುವವರನ್ನು ಆಶಾ ಕಾರ್ಯಕರ್ತರು ಮತ್ತು ಕ್ವಾರೆಂಟೈನ್‌ನಲ್ಲಿರುವರನ್ನು ಪಂಚಾಯತ್ ಅಧಿಕಾರಿಗಳು ನಿಗಾ ವಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಹೊರ ರಾಜ್ಯಗಳಿಂದ ರೈಲಿನಲ್ಲಿ ಜಿಲ್ಲೆಗೆ ಬರುವವರಿಂದ ಕಡ್ಡಾಯವಾಗಿ ಪರೀಕ್ಷೆ ವರದಿಯನ್ನು ಪರಿಶೀಲಿಸಬೇಕೆಂದು ಉಡುಪಿ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಲಸೆ ಕಾರ್ಮಿಕರಿಗೆ ಕೋವಿಡ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸದ್ಯದಲ್ಲಿ ನಾವೇ ಅವರಿಗೆ ಮಾಸ್ಕ್ ವಿತರಿಸುತ್ತೇವೆ. ಆ ಮೂಲಕ ಅವರಿಗೆ ಮಾಸ್ಕ್ ಅರಿವು ಮೂಡಿಸುವ ಅಭಿಯಾನ ಮಾಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News