ಬಂಗಾಳದ ಕೂಚ್‌ ಬೆಹಾರ್‌ ಗುಂಡಿನ ದಾಳಿಯದ್ದೆನ್ನಲಾದ ವೀಡಿಯೋ ವೈರಲ್:‌ ಭದ್ರತಾ ಪಡೆಗಳ ವಿರುದ್ಧ ವ್ಯಾಪಕ ಆಕ್ರೋಶ

Update: 2021-04-15 13:05 GMT

ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ನಾಲ್ಕನೇಯ ಹಂತದಲ್ಲಿ ಬೂತ್‌ ನಂ.126 ಕೂಚ್‌ ಬೆಹಾರ್‌ ನ ಸೀತಾಲ್ಕುಚ್ಚಿ ಎಂಬಲ್ಲಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದವು. ಗುಂಪುಗಳು ಪಡೆಗಳನ್ನು ಆಕ್ರಮಿಸಲು ಬಂದಾಗ ಆತ್ಮರಕ್ಷಣೆಗೆಂದು ಗುಂಡು ಹಾರಿಸಲಾಗಿದೆ ಎಂದು ಹೇಳಿದ್ದರೂ ಅಲ್ಲಿನ ಗ್ರಾಮಸ್ಥರ ಹೇಳಿಕೆಗಳು ವಿಭಿನ್ನವಾಗಿತ್ತು. "ಅವರು ಎರಡು ವಾಹನದಲ್ಲಿ ಬಂದು ಮತದಾನ ಮಾಡಲೆಂದು ಸಾಲಿನಲ್ಲಿ ನಿಂತಿದ್ದವರ ಮೇಲೆ ಗುಂಡು ಹಾರಿಸಿದರು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದರು. ಇದೀಗ ಈ ಮಾತಿಗೆ ಇಂಬು ನೀಡುವಂತೆ ಸೀತಾಲ್ಕುಚ್ಚಿಯದ್ದೆನ್ನಲಾದ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

ಇದನ್ನೂ ಓದಿ: ("ಯಾವ ಗುಂಪೂ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿರಲಿಲ್ಲ, ಮತದಾನಕ್ಕೆ ಸಾಲಿನಲ್ಲಿ ನಿಂತವರ ಮೇಲೆ ಗುಂಡು ಹಾರಿಸಲಾಯಿತು")

ಇಂಡಿಯಾ ಟುಡೆ ಕೋಲ್ಕತ್ತ ಉಪಸಂಪಾದಕ ಇಂದ್ರಜಿತ್‌ ಕುಂಡು ಈ ವೀಡಿಯೋವನ್ನು ಪೋಸ್ಟ್‌ ಮಾಡಿದ್ದು, "ಕೂಚ್‌ ಬೆಹಾರ್‌ ಜಿಲ್ಲೆಯ ಸಿತಾಲ್ಕುಚ್ಚಿಯಲ್ಲಿ ಕೇಂದ್ರೀಯ ಪಡೆಗಳು ಗುಂಡಿನ ದಾಳಿ ನಡೆಸಿ ನಾಲ್ಕು ದಿನಗಳಾಗಿವೆ. ಈ ಹೊಸ ವೈರಲ್‌ ವೀಡಿಯೋ ಅಂದಿನ ದಿನ ಏನು ನಡೆದಿತ್ತು ಎನ್ನುವುದನ್ನು ತೋರಿಸುತ್ತಿದೆ" ಎಂದು ಟ್ವೀಟ್‌ ಮಾಡಿದ್ದಾರೆ.

ಇದು ಮಾತ್ರವಲ್ಲದೇ ಹನ್ನೊಂದು ನಿಮಿಷಗಳ ಇನ್ನೊಂದು ವೀಡಿಯೋವನ್ನು ಆನಂದ್‌ ಬಝಾರ್‌ ಪತ್ರಿಕೆಯು ಬಿಡುಗಡೆ ಮಾಡಿದೆ. ವೀಡಿಯೋದಲ್ಲಿ ಅತೀಕಡಿಮೆ ಜನರಿರುವ ಮತಗಟ್ಟೆಯಲ್ಲಿ ಗುಂಡಿನ ಸದ್ದುಗಳು, ಜನರು ಅಸಹಾಯಕರಾಗಿ ಬೊಬ್ಬಿಡುವ ದೃಶ್ಯಗಳು, ಗುಂಡಿಗೆ ಬಲಿಯಾದ ಯುವಕನ ಶವದ ಮುಂದಿನ ಆಕ್ರಂದನ, ಪೊಲೀಸರ ದರ್ಪ ಸೇರಿದಂತೆ ಹಲವಾರು ವಿಚಾರಗಳು ಸೆರೆಯಾಗಿವೆ.

"300 ಜನರ ಗುಂಪೊಂದು ನಮ್ಮ ಮೇಲೆ ದಾಳಿ ಮಾಡಿತ್ತು ಎಂದು ಭದ್ರತಾ ಪಡೆಗಳು ಹೇಳುತ್ತಿದ್ದ ಗುಂಪು ಇಲ್ಲಿ ಕಾಣಿಸುತ್ತಿಲ್ಲ. ಇದೊಂದು ಕೊಲೆ ಕೃತ್ಯವಷ್ಟೇ... ಇದಕ್ಕೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಉತ್ತರ ನೀಡಬೇಕು ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ. "ಏನೂ ಮಾಡದ ಅಮಾಯಕರನ್ನು ಕೊಲೆಗೈದ ಬಳಿಕ ಸುಖವಾಗಿ ನಿದ್ರಿಸಲು ಹೇಗೆ ಸಾಧ್ಯ? ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರೆಕ್‌ ಒʼಬ್ರಿಯಾನ್‌ "ಮುಚ್ಚಿಹಾಕಲೆತ್ನಿಸಿದ ಘಟನೆಯ 11 ನಿಮಿಷಗಳ ವೀಡಿಯೋ ಸಾರ್ವಜನಿಕ ಡೊಮೈನ್‌ ಗಳಲ್ಲಿ ಹರಿದಾಡುತ್ತಿದೆ. ಕೇಂದ್ರೀಯ ಪಡೆಗಳು ಸೊಂಟದ ಕೆಳಗಡೆ ಶೂಟ್‌ ಮಾಡಬೇಕಿತ್ತೇ ಹೊರತು ಕೊಲ್ಲಲು ಹೇಗೆ ಸಾಧ್ಯ? ಇನ್ನೂ ಹಲವಾರು ಕಠಿಣ ಪ್ರಶ್ನೆಗಳಿಗೆ ಮೋದಿ, ಶಾ, ಹಾಗೂ ಚುನಾವಣಾ ಆಯೋಗ ಉತ್ತರಿಸಬೇಕು" ಎಂದು ಅವರು ಟ್ವೀಟ್‌ ಮಾಡಿದ್ದಾರೆ.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News