500 ಎಕರೆ ಜಾಗದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ: ಉಡುಪಿ ಡಿಸಿ ಜಗದೀಶ್

Update: 2021-04-15 14:06 GMT

ಉಡುಪಿ, ಎ.15: ಬೃಹತ್ ಕೈಗಾರಿಕೆಯೊಂದರ ಸ್ಥಾಪನೆಗೆ ಉಡುಪಿ ಜಿಲ್ಲೆಯಲ್ಲಿ 500 ಎಕರೆ ಜಾಗ ಗುರುತಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪ್ರೆಸ್‌ಕ್ಲಬ್ ಸಹಯೋಗದೊಂದಿಗೆ ಗುರುವಾರ ಉಡುಪಿಯ ಪತ್ರಿಕಾ ಭವನದಲ್ಲಿ ಜರಗಿದ ‘ತಿಂಗಳ ಮಾಧ್ಯಮ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಸಂವಾದದಲ್ಲಿ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಹೂಡಿಕೆದಾರರು ಬಹಳಷ್ಟು ಮಂದಿ ಮುಂದೆ ಬಂದಿರುವುದರಿಂದ ಜಾಗ ಗುರುತಿಸಲು ಸೂಚನೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಕೈಗಾರಿಕೆ ಸ್ಥಾಪಿಸುವಂತೆ ನಾವು ಹೇಳಿದ್ದೇವೆ. ಅಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜಾಗವನ್ನು ಹುಡುಕುವುದು ಕಷ್ಟದ ಕೆಲಸ ಆಗಿದೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸಾಧ್ಯ ಇಲ್ಲದಿದ್ದರೆ ಅಲ್ಲೇ ನಿರ್ಮಿಸುವ ಯೋಜನೆ ಕೂಡ ನಮ್ಮ ಮುಂದೆ ಇದೆ ಎಂದರು.

ಬೈಂದೂರಿನಲ್ಲಿ 60 ಎಕರೆ ಜಾಗ ಗುರುತಿಸಿ ಕೈಗಾರಿಕಾ ವಲಯನ್ನಾಗಿಸಲು ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಉಡುಪಿ- ಕಾಪು ಭಾಗದಲ್ಲಿ ಕೈಗಾರಿಕಾ ವಲಯಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬ್ರಹ್ಮಾವರ ಭಾಗದಲ್ಲಿ ಈಗಾಗಲೇ ಒಂದು ಜಾಗವನ್ನು ಗುರುತಿಸಲಾಗಿದೆ. ಕಾರ್ಕಳ ಜವಳಿ ಪಾರ್ಕ್, ಶಿಲ್ಪಕಲಾ ಪಾರ್ಕ್, ಜಿಲ್ಲೆಯಲ್ಲಿ ಟೆಕ್ಸ್‌ಟೈಲ್ ಪಾರ್ಕ್, ಫರ್ನಿಚರ್ ಪಾರ್ಕ್ ಮತ್ತು ಪ್ರತಿ ತಾಲೂಕಿನಲ್ಲಿ ಫುಡ್ ಪಾರ್ಕ್ ಮಾಡುವ ಯೋಜನೆ ಹಾಕಿ ಸರಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಸ್ಮಾರ್ಟ್ ಸಿಟಿಗೆ ಡಿಪಿಆರ್ ಸಿದ್ಧ
ಉಡುಪಿ- ಮಣಿಪಾಲವನ್ನು ಸ್ಮಾರ್ಟ್ ಸಿಟಿಯನ್ನಾಗಿಸುವ ಬಗ್ಗೆ 6-7 ತಿಂಗಳ ಕಾಲ ಚರ್ಚೆ ಮಾಡಿ ವಿಸ್ತೃತ ವರದಿ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಇದೀಗ ಸರಕಾರದಿಂದ ಮಂಜೂರು ಆಗುವ ಹಂತದಲ್ಲಿದೆ. ಇದು ಮಂಜೂರಾದರೆ ಉಡುಪಿ-ಮಣಿಪಾಲ ಇಡೀ ದೇಶದಲ್ಲಿಯೇ ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದು ಡಿಸಿ ತಿಳಿಸಿದರು.

ಕೇರಳ ಮಾದರಿಯಲ್ಲಿ ಹಡಿಲು ಬಿದ್ದ ಭೂಮಿಗೆ ಸಹಾಯಧನ ನೀಡುವ ಯೋಜನೆಗೆ ಕೃಷಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಬಾರಿ ಒಂದು ಸಾವಿರ ಹೆಕ್ಟೇರ್, ಇದೀಗ ಈ ವರ್ಷವೂ ಒಂದು ಸಾವಿರ ಹೆಕ್ಟೇರ್ ಭೂಮಿಯನ್ನು ಕೃಷಿ ಯೋಗ್ಯ ಭೂಮಿಯನ್ನಾಗಿಸುವುದು ನಮ್ಮ ಗುರಿಯಾಗಿದೆ. ಯುಪಿಸಿಎಲ್ ಹಾರುಬೂದಿಯಿಂದ ಕೃಷಿಗೆ ನಷ್ಟವಾಗಿರುವುದು ನಮ್ಮ ಗಮನ ಬಂದಿಲ್ಲ. ಒಂದು ವೇಳೆ ಹಾನಿಯಾಗಿದ್ದರೆ ಆ ಕಂಪೆನಿಯಿಂದಲೇ ನಷ್ಟ ಭರಿಸಲಾಗುವುದು ಎಂದರು.

ಅಧಿಕಾರಿಯಾಗಿ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. 60 ವರ್ಷಗಳ ಕಾಲವೂ ಇದರಲ್ಲಿಯೇ ಮುಂದುವರಿಯುವುದು ನನ್ನ ಉದ್ದೇಶವಾಗಿದೆ. ಅದು ಬಿಟ್ಟು ಜನಪ್ರತಿನಿಧಿಯಾಗುವ ಆಸೆ ನನ್ನ ಮುಂದೆ ಇಲ್ಲ. ಶಿಕ್ಷಣ ಇಲಾಖೆ ಆಯುಕ್ತರಾಗಿ ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳಿಗೆ ಶಿಕ್ಷಣ ನೀಡುವುದು ಮತ್ತು ಸರಕಾರಿ ಶಾಲೆಗೆ ಪ್ರತಿಷ್ಠೆ ಒದಗಿಸಿಕೊಡಬೇಕೆಂಬ ಕನಸು ನನ್ನದಾಗಿದೆ. ಜಿಲ್ಲಾಧಿಕಾರಿ ಅವಧಿ ಮುಗಿದ ಬಳಿಕ ಇಲಾಖಾ ಸಚಿವರ ಮುಂದೆ ಈ ಬೇಡಿಕೆ ಇಡುತ್ತೇನೆ. ಅವಕಾಶ ಕೊಟ್ಟರೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.

ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಉಡುಪಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಎನ್., ಪ್ರೆಸ್ ಕ್ಲಬ್ ಸಂಚಾಲಕ ಸುಬಾಷ್ ಚಂದ್ರ ವಾಗ್ಳೆ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತ ಶಶಿಧರ್ ಮಾಸ್ತಿಬೈಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

ಯುಜಿಡಿ ಪುನರ್ ವಿನ್ಯಾಸಕ್ಕಾಗಿ ಸರ್ವೆ
ನಗರದಲ್ಲಿ ಈ ಹಿಂದೆ ಮಾಡಿದ ಒಳಚರಂಡಿ ವಿನ್ಯಾಸ ಸರಿ ಇಲ್ಲದ ಕಾರಣ ಇಂದ್ರಾಣಿ ನದಿ ಕಲುಷಿತವಾಗಿದೆ. ಇಂದು ಒಳಚರಂಡಿ ಸಂಪೂರ್ಣ ಹಾಳಾಗಿದೆ. ಅದನ್ನು ಮರು ನಿರ್ಮಿಸಿದರೆ ಮಾತ್ರ ಇಂದ್ರಾಣಿ ನದಿಯನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ. ಅದಕ್ಕಾಗಿ ಪುನರ್ ವಿನ್ಯಾಸಕ್ಕಾಗಿ ಜಲ ಮಂಡಳಿಯಿಂದ ಸರ್ವೆ ಕಾರ್ಯ ಆರಂಭವಾಗಿದೆ. ಒಳಚರಂಡಿ ಸರಿಪಡಿಸಲು ಸುಮಾರು 400 ಕೋಟಿ ರೂ. ಹಣ ಬೇಕಾಗುತ್ತದೆ. ಈ ಬಗ್ಗೆ ಸರ್ವೆ ಮಾಡಿ ಅಂದಾಜು ಮೊತ್ತವನ್ನು ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿ ಮಂಜೂರಾತಿ ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೆರೆಪೀಡಿತ 64 ಗ್ರಾಪಂಗಳಿಗೆ ಬೋಟು
ಮಳೆಗಾಲಕ್ಕೆ ಸಂಬಂಧಿಸಿ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಕಂಟ್ರೋಲ್ ರೂಮ್ ನಿರ್ಮಾಣಕ್ಕೆ ಸರಕಾರದ ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ. ಕಳೆದ ಬಾರಿ ನೆರೆ ಪೀಡಿತ 64 ಗ್ರಾಪಂಗಳಿಗೆ ತಲಾ ಒಂದು ಬೋಟುಗಳನ್ನು ನೀಡಲು ಜಿಲ್ಲಾಡಳಿತ ಯೋಜನೆ ಹಾಕಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಬೈಂದೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಭೂ ಸ್ವಾಧೀನ ಮಾಡುವಂತೆ ಈವರೆಗೆ ಯಾವುದೇ ಸುತ್ತೋಲೆ ಬಂದಿಲ್ಲ. ಸರಕಾರದಿಂದ ನಿರ್ದೇಶನ ಬಂದ ಕೂಡಲೇ ಜಾಗವನ್ನು ಗುರುತಿಸುವ ಕಾರ್ಯ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News