ಒಂದೇ ದಿನದಲ್ಲಿ ಉಳಿದ ನಾಲ್ಕು ಸುತ್ತಿನ ಮತದಾನ ನಡೆಸಿ: ಚುನಾವಣಾ ಆಯೋಗಕ್ಕೆ ಮಮತಾ ಆಗ್ರಹ

Update: 2021-04-15 14:27 GMT

ಕೋಲ್ಕತಾ: ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯ ಇನ್ನುಳಿದ 4 ಸುತ್ತುಗಳ ಮತದಾನವನ್ನು ಒಂದೇ ದಿನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನಂತಿಸಿದ್ದಾರೆ.

ಪಶ್ಚಿಮಬಂಗಾಳದಲ್ಲೂ ಈಗ ಕೊರೋನ ಸೋಂಕು ಹೆಚ್ಚಾಗುತ್ತಿದ್ದು, ಎರಡು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ  ಕಾಂಗ್ರೆಸ್ ಅಭ್ಯರ್ಥಿ ರೆಝಾವುಲ್ ಹಕ್ ಗುರುವಾರ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 8 ಸುತ್ತುಗಳ ಮತದಾನವನ್ನು ನಿಗದಿಪಡಿಸಲಾಗಿದ್ದು, ಐದನೇ ಹಂತದ ಮತದಾನವು ಎಪ್ರಿಲ್ 17 ರಂದು ನಡೆಯಲಿದೆ. ಈ ಹಿಂದಿನ ನಾಲ್ಕು ಹಂತದ ಚುನಾವಣೆಗಳು ಕ್ರಮವಾಗಿ ಮಾರ್ಚ್ 27, ಎಪ್ರಿಲ್ 1, ಎಪ್ರಿಲ್ 6 ಮತ್ತು ಎಪ್ರಿಲ್ 10 ರಂದು ನಡೆದಿವೆ.

"ಕೊರೋನದ ತೀವ್ರ ಹಾವಳಿಯ ಮಧ್ಯೆ, ಪಶ್ಚಿಮಬಂಗಾಳ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ನಾವು ದೃಢವಾಗಿ ವಿರೋಧಿಸಿದ್ದೇವೆ. ಈಗ,ಪ್ರಕರಣಗಳಲ್ಲಿನ ಭಾರೀ ಏರಿಕೆಯ ದೃಷ್ಟಿಯಿಂದ, ಉಳಿದ ಹಂತಗಳನ್ನು ಒಂದೇ ದಿನ ನಡೆಸುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸುತ್ತೇನೆ. ಇದು ಕೋವಿಡ್-19ಗೆ  ಮತ್ತಷ್ಟು ಒಡ್ಡಿಕೊಳ್ಳುವುದರಿಂದ ಜನರನ್ನು ರಕ್ಷಿಸುತ್ತದೆ'' ಎಂದು ಬ್ಯಾನರ್ಜಿ ಗುರುವಾರ ಸಂಜೆ ಟ್ವೀಟ್ ಮಾಡಿದ್ದಾರೆ.

ಬಂಗಾಳದಲ್ಲಿ ಉಳಿದ ಹಂತಗಳ ಚುನಾವಣೆಯನ್ನು ಒಟ್ಟುಗೂಡಿಸುವ ಪ್ರಶ್ನೆಯಿಲ್ಲ ಎಂದು ಇಂದು ಬೆಳಗ್ಗೆ ಚುನಾವಣಾ ಆಯೋಗ ಹೇಳಿದ್ದು ಈ ಮೂಲಕ ಈ ವಿಷಯದ ಬಗೆಗಿನ ಊಹಾಪೋಹಗಳಿಗೆ ಅಂತ್ಯ ಹಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News