ಕಾಶ್ಮೀರದಲ್ಲಿ ನುಸುಳುವಿಕೆ ಪ್ರಯತ್ನ ವಿಫಲ, 50 ಕೋ.ರೂ.ಮೌಲ್ಯದ ಮಾದಕದ್ರವ್ಯ ವಶ

Update: 2021-04-15 14:39 GMT
ಸಾಂದರ್ಭಿಕ ಚಿತ್ರ

ಶ್ರೀನಗರ,ಎ.15: ಉತ್ತರ ಕಾಶ್ಮೀರದ ಕುಪ್ವಾರಾದ ತಂಗಧಾರ್ ವಿಭಾಗದ ನಿಯಂತ್ರಣ ರೇಖೆಯಲ್ಲಿ ಬುಧವಾರ ರಾತ್ರಿ ನುಸುಳುವಿಕೆ ಮತ್ತು ಮಾದಕದ್ರವ್ಯ ಕಳ್ಳಸಾಗಾಣಿಕೆ ಪ್ರಯತ್ನವನ್ನು ಜಮ್ಮು-ಕಾಶ್ಮೀರ್ ಪೊಲೀಸ್, ಸೇನೆ ಮತ್ತು ಬಿಎಸ್ಎಫ್ ಜಂಟಿ ತಂಡವು ವಿಫಲಗೊಳಿಸಿದೆ. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಸೇನೆಯ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಯೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳದಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 50 ಕೋ.ರೂ.ಮೌಲ್ಯದ 10 ಕೆ.ಜಿ.ಮಾದಕದ್ರವ್ಯಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ರಕ್ಷಣಾ ವಕ್ತಾರರು ಗುರುವಾರ ಇಲ್ಲಿ ತಿಳಿಸಿದರು.

ವಾರದ ಹಿಂದಷ್ಟೇ ಇದೇ ಪ್ರದೇಶದಿಂದ 10 ಕೆ.ಜಿ.ಹೆರಾಯಿನ್ ಅನ್ನು ಭದ್ರತಾಪಡೆಗಳು ವಶಪಡಿಸಿಕೊಂಡಿದ್ದವು.

ನಿಯಂತ್ರಣ ರೇಖೆಯಿಂದ ಸುಮಾರು 500 ಮೀ.ಅಂತರದಲ್ಲಿ ಗಡಿಬೇಲಿಯ ಸಮೀಪ ಕಳ್ಳಸಾಗಣೆದಾರರು ಮಾದಕದ್ರವ್ಯಗಳನ್ನು ಸಾಗಿಸುತ್ತಿದ್ದನ್ನು ಭದ್ರತಾ ಪಡೆಗಳು ಗಮನಿಸಿದ್ದವು. ಅವರನ್ನು ತಡೆಯಲು ಮುಂದಾದಾಗ ಸಣ್ಣ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿತ್ತು. ಸೇನೆಯ ಓರ್ವ ಕಿರಿಯ ಅಧಿಕಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಳ್ಳ ಸಾಗಾಣಿಕೆದಾರರೊಂದಿಗೆ ಪಾಕ್ ಮೂಲದ ಭಯೋತ್ಪಾದಕರೂ ಇದ್ದರೆಂದು ಶಂಕಿಸಲಾಗಿದೆ. ನುಸುಳುಕೋರರ ತಂಡ ಪರಾರಿಯಾಗಿದ್ದು,ಇಂದು ಬಳಿಗ್ಗೆ ಶೋಧ ಕಾರ್ಯಾಚರಣೆಯಲ್ಲಿ ಸ್ಥಳದಲ್ಲಿ ಮಾದಕದ್ರವ್ಯಗಳು ಪತ್ತೆಯಾಗಿವೆ ಎಂದು ವಕ್ತಾರರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News