ಉಡುಪಿ: ರಾಜಾಂಗಣದಲ್ಲಿ ರಾಮಾಯಣ ಕಲಾಕೃತಿ, ಗೊಂಬೆಗಳ ಪ್ರದರ್ಶನ

Update: 2021-04-15 14:42 GMT

ಉಡುಪಿ, ಎ.15: ಪರ್ಯಾಯ ಅದಮಾರು ಮಠದ ವತಿಯಿಂದ ಉಡುಪಿ ಶ್ರೀಕೃಷ್ಣಮಠ ರಾಜಾಂಗಣದಲ್ಲಿ 15 ದಿನಗಳ ಕಾಲ ನಡೆಯುವ ‘ಶ್ರೀರಾಮ ಹನುಮದುತ್ಸವ’ ದಲ್ಲಿ ರಾಮ್‌ಸನ್ಸ್ ಮೈಸೂರು, ‘ಧಾತು’ ಬೆಂಗಳೂರು ಹಾಗೂ ‘ಪ್ರಾಚೀ’ ಉಡುಪಿ ಇವರ ಸಂಗ್ರಹದ ರಾಮಾಯಣ ಕಲಾಕೃತಿ, ಗೊಂಬೆಗಳ ಪ್ರದರ್ಶನವನ್ನು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಉದ್ಘಾಟನೆಯ ಬಳಿಕ ಸ್ವಾಮೀಜಿಗಳಿಬ್ಬರೂ ರಾಮಾಯಣದ ಕತೆಯನ್ನು ಸಾರುವ ಗೊಂಬೆಗಳ ಪ್ರದರ್ಶನ ಹಾಗೂ ಕಲಾಕೃತಿಗಳನ್ನು ವೀಕ್ಷಿಸಿದರು. ಗುರುರಾಜ ಮತ್ತು ವಿದುಲಾ ವಿವರಣೆಯನ್ನು ನೀಡಿದರು.

ಸನ್ಮಾನ: ಇದೇ ವೇಳೆ ಶ್ರೀಈಶಪ್ರಿಯತೀರ್ಥ ಶ್ರೀಪಾದರು ‘ಪ್ರಾಚೀ’ ಉಡುಪಿ ಆಯೋಜಿಸಿರುವ ‘ಬಿಸು ಸಂಭ್ರಮ’ದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಪೆರುವೋಡಿ ನಾರಾಯಣ ಭಟ್, ಉಡುಪಿ ಸೀರೆಯ ತಯಾರಕರಾದ ಸಂಜೀವ ಶೆಟ್ಟಿಗಾರ್, ಬೆತ್ತ ಬಿಳಲಿನ ವಸ್ತುಗಳ ತಯಾರಿಕೆಯ ಪರಿಣತರಾದ ಕುಮಾರ್ ಇವರುಗಳಿಗೆ ‘ಯುಗಾದಿ ಪುರಸ್ಕಾರ’ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಮಣಿಪಾಲ ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್ ವಿನೋದ್ ಭಟ್, ಮಣಿಪಾಲ ಮಾಹೆಯ ಪ್ರಾಧ್ಯಾಪಕಿ ಡಾ.ನೀತಾ ಇನಾಂದಾರ್, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣಾ ಕುಮಾರ್ ಮತ್ತು ಪ್ರಾಚೀ ಸಂಸ್ಥೆಯ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News