ಅರಬಿ ಸಮುದ್ರದಲ್ಲಿ ಬೋಟ್ ಮುಳುಗಡೆ ಪ್ರಕರಣ: ನಾಪತ್ತೆಯಾದ 9 ಮೀನುಗಾರರಿಗಾಗಿ ಮುಂದುವರಿದ ಶೋಧ

Update: 2021-04-15 14:51 GMT
ಸಾಂದರ್ಭಿಕ ಚಿತ್ರ

ಮಂಗಳೂರು,ಎ.15: ಸುರತ್ಕಲ್ ಲೈಟ್‌ಹೌಸ್‌ನಿಂದ ಸುಮಾರು 42 ನಾಟಿಕಲ್ ಮೈಲ್ ದೂರದ ಅರಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾಗಿರುವ ಒಂಭತ್ತು ಮೀನುಗಾರರ ಪತ್ತೆಗಾಗಿ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಶೋಧ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ.

ಈ ದುರಂತದಲ್ಲಿ ಮೃತಪಟ್ಟ ತಮಿಳ್ನಾಡಿನ ಅಲೆಗ್ಸಾಂಡರ್ ಮತ್ತು ದಾಸನ್ ಚನ್ನಪ್ಪ ಅವರ ಮೃತದೇಹವನ್ನು ಬುಧವಾರ ಆ್ಯಂಬುಲೆನ್ಸ್‌ನಲ್ಲಿ ಸಾಗಿಸಲಾಗಿದ್ದರೆ, ಪಶ್ಚಿಮ ಬಂಗಾಳದ ಮಾಣಿಕ್‌ದಾಸ್‌ರ ಮೃತದೇಹವನ್ನು ಗುರುವಾರ ಸಂಜೆ ಬೆಂಗಳೂರು ಮೂಲಕ ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಯಿತು.

ಮಾಣಿಕ್‌ದಾಸ್‌ರ ಕೋವಿಡ್-19 ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಬಳಿಕ ಇಂದು ತವರೂರಿಗೆ ಕಳುಹಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ದುರ್ಘಟನೆಯಲ್ಲಿ ಪಾರಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಮತ್ತು ತಮಿಳ್ನಾಡಿನ ವೆಲು ಮುರುಗನ್ ರಾಮಲಿಂಗನ್ ತವರೂರು ಸೇರಿದ್ದರೆ, ನಾಪತ್ತೆಯಾಗಿರುವ ತಮಿಳ್ನಾಡಿನ ರಾಮನಾಥಪುರದ ಪಳನಿ, ಪಾಲಮುರುಗನ್, ಮಾಣಿಕ್ಯವೇಣು, ತೆನ್ಸ್ಸನ್, ಪಶ್ಚಿಮ ಬಂಗಾಳದ ಉತ್ತಮ್‌ದಾಸ್, ಮಾನಿಕ್ ದಾಸ್, ಉತ್ತಮ್ ದಾಸ್ ಸಹಿತ 9 ಮಂದಿ ಮೀನುಗಾರರ ಪತ್ತೆಗಾಗಿ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯು ಹೆಲಿಕಾಪ್ಟರ್ ಮತ್ತು ಮುಳುಗುತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಆದರೆ ಗುರುವಾರದವರೆಗೂ ಅವರ ಸುಳಿವು ಸಿಕ್ಕಿಲ್ಲ ಎಂದು ತನಿಖೆ ನಡೆಸುತ್ತಿರುವ ಕರಾವಳಿ ಕಾವಲು ಪೊಲೀಸ್ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎ.11ರಂದು ಬೆಳಗ್ಗೆ 10 ಗಂಟೆಗೆ ಕೇರಳದ ಬೇಪೂರ್‌ನಿಂದ ಹೊರಟ ಮೀನುಗಾರಿಕೆಯ ರಭಾ ಎಂಬ ಹೆಸರಿನ ಈ ಬೋಟ್ ಎ.12ರ ತಡರಾತ್ರಿ ಸುಮಾರು 2:05ರ ವೇಳೆಗೆ ಸುರತ್ಕಲ್ ಲೈಟ್‌ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದಲ್ಲಿ ಮುಳುಗಡೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News