"ಫಲಾನುಭವಿಗಳ ಆಯ್ಕೆ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಲಿ"

Update: 2021-04-15 15:05 GMT

ಮಂಗಳೂರು, ಎ.15: ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಾಲ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಲಾನುಭವಿಗಳನ್ನು ಆಯ್ಕೆ ಮಾಡುವ ಸಮಿತಿಗೆ ಶಾಸಕರ ಬದಲು ಜಿಲ್ಲಾಧಿಕಾರಿ ಅಧ್ಯಕ್ಷರಾಗುವಂತಹ ತಿದ್ದುಪಡಿ ತರಬೇಕು ಎಂಬ ಬೇಡಿಕೆಯನ್ನು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಗುರುವಾರ ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ಮುಂದಿಟ್ಟರು.

ಸುಮಾರು 14 ತಿಂಗಳ ಬಳಿಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನವಾನೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರ ಸ್ವಾಮಿ ಉಪಸ್ಥಿತರಿದ್ದರು.

ದಲಿತ ಮುಖಂಡ ಆನಂದ ಎಸ್.ಪಿ. ಮಾತನಾಡಿ ಲಾನುಭವಿಗಳ ಆಯ್ಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಇತ್ತು. ಬಳಿಕ ಅದನ್ನು ಬದಲಾಯಿಸಿ ಶಾಸಕರಿಗೆ ವಹಿಸಲಾಗಿತ್ತು. ಆದರೆ ಶಾಸಕರ ನೇತೃತ್ವದ ಸಮಿತಿಯು ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಶಾಸಕರು ತಮಗೆ ಬೇಕಾದ ಅಥವಾ ಪಕ್ಷದ ಕಾರ್ಯಕರ್ತರನ್ನು ಲಾನುಭವಿಗಳನ್ನಾಗಿ ಆಯ್ಕೆ ಮಾಡುತ್ತಾರೆ. ಇದರಿಂದ ಅರ್ಹರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳನ್ನೇ ಲಾನುಭವಿಗಳ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

ಬಂಟ್ವಾಳದಿಂದ ಆಟೋ ರಿಕ್ಷಾದಲ್ಲಿ ರೋಗಿಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ಕರೆ ತರುವ ಸಂದರ್ಭಗಳಲ್ಲಿ ಪಡೀಲ್‌ನಲ್ಲಿ ತಡೆದು ವಾಹನ ಚಾಲಕ/ಮಾಲಕರಿಗೆ ದಂಡ ವಿಧಿಸಲಾಗುತ್ತಿದೆ ಎಂದು ದಲಿತ ಮುಖಂಡ ವಿಶ್ವನಾಥ್ ಚಿಂತಿಮಾರ್ ಆಪಾದಿಸಿದರು. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸಿಗದಿದ್ದಾಗ ಆಟೋ ರಿಕ್ಷಾಗಳಲ್ಲಿ ರೋಗಿಗಳನ್ನು ಸಾಗಿಸುವುದು ಅನಿವಾರ್ಯವಾಗುತ್ತಿದೆ. ಅಂತಹ ಸಂದರ್ಭ ನಗರ ಪ್ರವೇಶಿಸುವ ಆಟೋ ರಿಕ್ಷಾಗಳಿಗೆ ವಿನಾಯಿತಿ ನೀಡಬೇಕು ಎಂದರು.

ಬಂಟ್ವಾಳ ತಾಲೂಕು ಆಸ್ಪತ್ರೆಯ ಕೆಲವು ವೈದ್ಯರು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಸುರಕ್ಷಿತ ಅಂತರ ಕಾಪಾಡುತ್ತಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೊರೋನ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ವಿಶ್ವನಾಥ ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ದಾಖಲಾಗುವ ಕೆಲವು ದಲಿತ ದೌರ್ಜನ್ಯ ಪ್ರಕರಣಗಳನ್ನು ಬಿ ರಿಪೋರ್ಟ್ ಹಾಕಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಬೆಳ್ತಂಗಡಿಯ ಶೇಖರ್ ಆಪಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿ 3 ವರ್ಷಗಳಾದರೂ ಡೋರ್ ನಂಬರ್ ನೀಡದಿರುವ ಬಗ್ಗೆ ಪುತ್ತೂರಿನ ಮಂಜುಳಾ ದೂರಿದರು. ದಲಿತರ ಕುಂದುಕೊರತೆ ಸಭೆ ನಡೆಯುವ ಈ ಸಭಾಂಗಣದಲ್ಲಿ ಸಿಸಿ ಟಿವಿ ವ್ಯವಸ್ಥೆ ಮಾಡ ಬೇಕೆಂದು ಮುಂಡಾಜೆಯ ಅನಂತ್ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ 3 ನೇ ರವಿವಾರ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಲಿತರ ಕುಂದು ಕೊರತೆ ಮಾಸಿಕ ಸಭೆ ನಡೆಸಲಾಗುವುದು ಎಂದು ಎಸ್ಪಿ ಋಷಿಕೇಶ್ ಭಗವಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News