ಉಡುಪಿ ಜಿಲ್ಲೆಯಲ್ಲಿ ಗುರುವಾರ 111 ಮಂದಿಗೆ ಕೊರೋನ ಪಾಸಿಟವ್

Update: 2021-04-15 15:09 GMT

ಉಡುಪಿ, ಎ.15: ಕೊರೋನ ಎರಡನೇ ಅಲೆ ಜಿಲ್ಲೆಯಾದ್ಯಂತ ಪಸರಿಸಿರುವ ಸೂಚನೆಗಳು ಕಂಡುಬರುತಿದ್ದು, ಗುರುವಾರ ಒಟ್ಟು 111 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 59 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ, ಸದ್ಯ ಜಿಲ್ಲೆಯಲ್ಲಿ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ ಈಗ 526ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 111 ಮಂದಿಯಲ್ಲಿ 59 ಮಂದಿ ಪುರುಷರು ಹಾಗೂ 52 ಮಂದಿ ಮಹಿಳೆಯರು. ಇವರಲ್ಲಿ 63 ಮಂದಿ ಉಡುಪಿ ತಾಲೂಕಿನವರಾದರೆ 31 ಮಂದಿ ಕುಂದಾಪುರ ತಾಲೂಕಿನವರು. ಉಳಿದ 17 ಮಂದಿ ಕಾರ್ಕಳ ತಾಲೂಕಿನವರು. 111ರಲ್ಲಿ 89 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು. ಬುಧವಾರ 59 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,651ಕ್ಕೇರಿದೆ. ನಿನ್ನೆ ಜಿಲ್ಲೆಯ 2596 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 111 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 26,369 ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನಿನ್ನೆಯವರೆಗೆ ಚಿಕಿತ್ಸೆಯಲ್ಲಿರುವ 98 ಮಂದಿ ಸೋಂಕಿತರಲ್ಲಿ 14 ಮಂದಿ ಮಾತ್ರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,57,163 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 192 ಆಗಿದೆ.

ಗುರುವಾರ 3450 ಮಂದಿಗೆ ಕೊರೋನ ಲಸಿಕೆ
ಕೊರೋನ ವಿರುದ್ಧದ ಲಸಿಕೆಯನ್ನು ಜಿಲ್ಲೆಯಲ್ಲಿ ಇಂದು ಒಟ್ಟು 3450 ಮಂದಿ ಸ್ವೀಕರಿಸಿದ್ದಾರೆ. ಇವರಲ್ಲಿ 2700 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 750 ಮಂದಿಗೆ ಎರಡನೇ ಡೋಸ್ ನೀಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಗುರುವಾರ ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 3360 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 2694 ಮಂದಿ ಮೊದಲ ಡೋಸ್‌ನ್ನೂ, 666 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 64 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 26 ಮಂದಿ ಕೊರೋನ ಮುಂಚೂಣಿ ಯೋಧರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ 1,52,003 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 24,940 ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News