ಐಪಿಎಲ್: ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ರೋಚಕ ಜಯ

Update: 2021-04-16 04:51 GMT

ಮುಂಬೈ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಡೇವಿಡ್ ಮಿಲ್ಲರ್ ಅರ್ಧಶತಕ ಹಾಗೂ ಆಲ್ ರೌಂಡರ್ ಕ್ರಿಸ್ ಮೊರಿಸ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ನ 7ನೇ ಪಂದ್ಯವನ್ನು 3 ವಿಕೆಟ್ ಗಳಿಂದ ರೋಚಕ ಜಯ ದಾಖಲಿಸಿದೆ.

ಗೆಲ್ಲಲು 148 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡ 19.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಔಟಾಗದೆ 36 ರನ್(18 ಎಸೆತ, 4 ಬೌಂಡರಿ)ಗಳಿಸಿದ ಮೊರಿಸ್ ಸಿಕ್ಸರ್ ಸಿಡಿಸುವ ಮೂಲಕ ರಾಜಸ್ಥಾನಕ್ಕೆ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಗೆಲುವು ತಂದರು.

9.2 ಓವರ್ ಗಳಲ್ಲಿ 42 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದ್ದ ರಾಜಸ್ಥಾನ ಸೋಲಿನ  ಭೀತಿಯಲ್ಲಿತ್ತು. ಆಗ ತಂಡವನ್ನು ಆಧರಿಸಿದ ಮಿಲ್ಲರ್(62, 43 ಎಸೆತ, 7 ಬೌಂಡರಿ, 2 ಸಿಕ್ಸರ್)ಹಾಗೂ ರಾಹುಲ್ ತೆವಾಟಿಯಾ(19, 17 ಎಸೆತ)6ನೇ ವಿಕೆಟಿಗೆ 48 ರನ್ ಜೊತೆಯಾಟ ನಡೆಸಿದರು. ತೆವಾಟಿಯಾ ಹಾಗೂ ಮಿಲ್ಲರ್ ಔಟಾದಾಗ ರಾಜಸ್ಥಾನದ ಸ್ಕೋರ್ 7ಕ್ಕೆ104 ರನ್.

ಕ್ರಿಸ್ ಮೋರಿಸ್ ಹಾಗೂ ಜೈದೇವ್ ಉನದ್ಕಟ್ 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 46 ರನ್ ಸೇರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಡೆಲ್ಲಿಯ ಪರವಾಗಿ ಅವೇಶ್ ಖಾನ್(3-32), ಕ್ರಿಸ್ ವೋಕ್ಸ್(2-22)ಹಾಗೂ ಕಾಗಿಸೊ ರಬಾಡ(2-30)7 ವಿಕೆಟ್ ಹಂಚಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಯಕ ರಿಷಭ್ ಪಂತ್ ಅರ್ಧಶತಕದ ಕೊಡುಗೆ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News