ಮೀನುಗಾರಿಕಾ ಬೋಟ್: ಡಿಸೇಲ್ ಸಬ್ಸಿಡಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥ; ಸಚಿವ ಅಂಗಾರ

Update: 2021-04-15 18:09 GMT

ಮಂಗಳೂರು: ಈಗಾಗಲೇ ನಾಲ್ಕು ತಿಂಗಳಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‍ಗಳಿಗೆ ಡೀಸೆಲ್ ಸಬ್ಸಿಡಿ ಬಂದಿಲ್ಲ. ಈ ಕುರಿತು ಎ.18ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸರಿಸುಮಾರು 45 ಕೋಟಿ ರೂ. ಸಬ್ಸಿಡಿ ಶೀಘ್ರದಲ್ಲಿಯೇ ಬರುವಂತೆ ಪ್ರಯತ್ನ ಮಾಡುತ್ತೇನೆ ಎಂದು ಮೀನುಗಾರಿಕಾ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್. ಹೇಳಿದರು.

ಅವರು ಬುಧವಾರ ಮಂಗಳೂರು ಮೀನುಗಾರಿಕಾ ದಕ್ಕೆ ಹಾಗೂ ಕಚೇರಿಗೆ ಭೇಟಿ ಮೀನುಗಾರ ಮುಖಂಡರ ಜತೆಯಲ್ಲಿ ನಡೆದ ಸಭೆಯ ನಂತರ ಮಾತನಾಡಿ, ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಬಂದಿಲ್ಲ. ಕೋವಿಡ್ ಕಾರಣದಿಂದ ಇದು ಆಗಿದೆ. ಈಗ ಮತ್ತೆರಡು ತಿಂಗಳು ಮುಂದೆ ಹೋಗಿದೆ. ಈ ಮೂಲಕ ಸರಿಸುಮಾರು 75 ಕೋಟಿ ರೂ. ಅಗುತ್ತದೆ. ಮೀನುಗಾರಿಕೆ ಮಾಡುವವರಿಗೆ ಇದರಿಂದ ಸಮಸ್ಯೆಯಾಗಿದೆ ಈ ಕುರಿತು  ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.

ಮಂಗಳೂರು ಬಂದರಿನಲ್ಲಿ ಮೂರನೇ ಜೆಟ್ಟಿ ಕಾಮಗಾರಿ ವಿಸ್ತರಣೆ ಕುರಿತು ಮೀನುಗಾರಿಕೆ ಮುಖಂಡರ ಜತೆಯಲ್ಲಿ ಮಾತನಾಡಿದ್ದೇವೆ. ಬೋಟ್‍ಗಳು ನಿಲ್ಲುವ ಕೆಲಸ ಸಮರ್ಥವಾಗಿ ಆಗಬೇಕು ಈ ನಿಟ್ಟಿನಲ್ಲಿ ಏ.18ರಂದು ಬೆಂಗಳೂರಿನ ಭೇಟಿಯ  ಸಮಯದಲ್ಲಿ ಗಮನ ಸೆಳೆದು ಕಾಮಗಾರಿಯನ್ನು ಆರಂಭಿಸುವ ಕುರಿತು ಪ್ರಯತ್ನ ಮಾಡುತ್ತೇನೆ ಎಂದರು.

ಬೆಂಗ್ರೆಯ ಕೋಸ್ಟಲ್ ಬರ್ತ್ ವಿಚಾರದಲ್ಲಿ  ಸ್ಥಳೀಯರು ವಿರೋಧದ ಕುರಿತು ಎತ್ತಿದ ಪ್ರಶ್ನೆಗೆ ಅವರು ಉತ್ತರಿಸಿ, ಯೋಜನೆ ಅನುಷ್ಠಾನಕ್ಕೆ ವಿರೋಧ ಸಲ್ಲದು. ಮುಖ್ಯವಾಗಿ ಈ ಕುರಿತು ಸಾಧಕ ಬಾಧಕಗಳನ್ನು ಅರಿಯುವ ಕಾರ್ಯವಾಗಬೇಕು. ಮೀನುಗಾರರಲ್ಲಿ ಈ ಕುರಿತು ಮಾಹಿತಿ ಸಂಗ್ರಹಿಸುತ್ತೇವೆ. ಈ ಬಳಿಕ ತಾಂತ್ರಿಕ ಕೆಲಸದ ಮಾಹಿತಿ ಪಡೆದುಕೊಂಡು ಭವಿಷ್ಯದಲ್ಲಿ ಸಿಗುವ ಲಾಭದ ಲೆಕ್ಕಚಾರದಲ್ಲಿ ಅಧ್ಯಯನ ನಡೆಸಿಕೊಂಡು ಈ ಬಳಿಕ ಇದರ ಜಾಗೃತಿ, ಮಾಹಿತಿ ನೀಡುವ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭ ಮೀನುಗಾರಿಕಾ ಮುಖಂಡರಾದ ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ಇಬ್ರಾಹಿಂ, ರಾಜೇಶ್ ಪುತ್ರನ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಭಾರ ಹರೀಶ್ ಕುಮಾರ್, ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್, ಕೆಎಫ್‍ಡಿಸಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಬೆಂಗ್ರೆ, ಕೆಎಫ್‍ಡಿಸಿಯ ಎಂಡಿ ಎಂ.ಎಲ್. ದೊಡ್ಡಮನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News