ಸಜಿಪನಡು: ರಕ್ತದಾನ, ಉಚಿತ ವೈದ್ಯಕೀಯ ಶಿಬಿರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಬಂಟ್ವಾಳ, ಎ.16: ಕೇಂದ್ರ ಜುಮಾ ಮಸೀದಿ ಸಜಿಪನಡು ಇದರ ಆಶ್ರಯದಲ್ಲಿ 'ಮದರಸ ಸುವರ್ಣ ಮಹೋತ್ಸವ'ದ ಅಂಗವಾಗಿ ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ನೂರಿಯ ಕೇಂದ್ರ ಮದರಸದ ಆವರಣದಲ್ಲಿ ಇತ್ತೀಚಿಗೆ ನಡೆಯಿತು.
ಸಜಿಪನಡು ಕೇಂದ್ರ ಜುಮಾ ಮಸೀದಿ ಖತೀಬ್ ಅಲ್ಹಾಜ್ ಅಬೂಸ್ವಾಲಿಹ್ ಫೈಝಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂದರ್ ಬದ್ರಿಯಾ ಜುಮಾ ಮಸೀದಿ ಖತೀಬ್ ಶೇಕ್ ಅಬ್ದುಲ್ಲ ಬಾಖವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೇಂದ್ರ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ವಹಿಸಿದ್ದರು.
ಸಜೀಪನಡು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಮೋಹಿನುದೀನ್ ತುಫೈಲ್ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕೋವಿಡ್ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
30 ವರ್ಷಗಳ ಕಾಲ ಊರಿನ ಮಕ್ಕಳಿಗೆ ವಿದ್ಯೆ ಬೋಧಿಸಿದ ನಿವೃತ್ತ ಹೆಡ್ಮಾಸ್ಟರ್ ಆನಂದ ರೈ, ಪ್ರೈಮರಿ ಹೆಲ್ತ್ ಸೆಂಟರ್ ನ ಮುಖ್ಯ ವೈದ್ಯಾಧಿಕಾರಿ ಡಾ.ಮೋಹಿನುದೀನ್ ತುಫೈಲ್, ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮೋಹನ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಲೋಕ್ ನಾಯಕ್, ಸ್ಥಳೀಯ ಗ್ರಾಮ ಪಂಚಾಯತ್ ವಿಲೇಜ್ ಅಕೌಂಟೆಂಟ್ ಪ್ರಕಾಶ್ ಮತ್ತಿಹಳ್ಳಿ, ಸಾಲೆತ್ತೂರ್ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕರೀಂ ಕೋಟೆಕಣಿ, ಪೋಸ್ಟ್ ಮಾಸ್ಟರ್ ಯೂಸುಫ್ ಕೋಟೆಕಣಿ ಅವರನ್ನು ಜಮಾತ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೇಂದ್ರ ಜಮಾತ್ ಪ್ರಧಾನ ಕಾರ್ಯದರ್ಶಿ SK ಮಹಮ್ಮದ್, ಸಜಿಪನಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ SN ಇಕ್ಬಾಲ್ ಪಾಲ್ಗೊಂಡಿದ್ದರು.
ಬಳಿಕ ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 51 ಯೂನಿಟ್ ರಕ್ತ ಶೇಖರಿಸಲಾಯಿತು.
ಜಮಾಅತ್ ಆಡಳಿತ ಸಮಿತಿಯ ಉಪಾಧ್ಯಕ್ಷ ಅಸಿಫ್ ಕುನಿಲ್ ಸ್ವಾಗತಿಸಿ, ಜಮಾಅತ್ ಆಡಳಿತ ಸಮಿತಿಯ ಜೊತೆ ಕಾರ್ಯದರ್ಶಿ ಅಬ್ದುಲ್ ಜಸೀಮ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.