ತಮಿಳುನಾಡಿನಲ್ಲಿ ಇವಿಎಂಗಳ ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಎಂ.ಕೆ. ಸ್ಟಾಲಿನ್

Update: 2021-04-16 13:17 GMT

ಹೊಸದಿಲ್ಲಿ: ತಮಿಳುನಾಡಿನಲ್ಲಿ ಎಪ್ರಿಲ್ 6ರಂದು ಮತದಾನ ಮುಗಿದ ನಂತರ ಇವಿಎಂ ಮತ್ತು ಸ್ಟ್ರಾಂಗ್ ರೂಮ್‌ಗಳ ಸುರಕ್ಷತೆಯ ಕುರಿತಾಗಿ ದ್ರಾವಿಡ ಮುನ್ನೇತ್ರ ಕಳಗಂ  (ಡಿಎಂಕೆ) ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅನುಮಾನ ವ್ಯಕ್ತಪಡಿಸಿದ್ದಾರೆ.

 ಈ ಕುರಿತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿರುವ ಸ್ಟಾಲಿನ್ ಅವರು ಇವಿಎಂ ಹಾಗೂ ಸ್ಟ್ರಾಂಗ್ ರೂಮ್‌ಗಳ  ಸುರಕ್ಷತೆಗಾಗಿ ಚುನಾವಣಾ ಸಮಿತಿಯು ರಚಿಸಿರುವ ಶಿಷ್ಟಾಚಾರಗಳನ್ನು ತಮಿಳುನಾಡಿನಲ್ಲಿ ಅನುಸರಿಸಲಾಗುತ್ತಿಲ್ಲ ಎಂದು ದೂರಿದ್ದಾರೆ.

ಮತದಾನದ ಇವಿಎಂಗಳನ್ನು ಸಂಗ್ರಹಿಸಲಾಗಿರುವ ರಾಜ್ಯದಾದ್ಯಂತದ ಇರುವ ಅನೇಕ ಸ್ಟ್ರಾಂಗ್ ರೂಮ್ ಕ್ಯಾಂಪಸ್‌ಗಳಲ್ಲಿ ಸಂಪೂರ್ಣ ಪ್ರೋಟೋಕಾಲ್  ಕೊರತೆಯಿದೆ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ರಾತ್ರಿಯ ಸಮಯದಲ್ಲಿ ನಿಗೂಢವಾಗಿ ಸ್ಟ್ರಾಂಗ್ ರೂಮ್ ಗಳ ಒಳಗೆ ಕೆಲವು ಮುಚ್ಚಿದ ಕಂಟೈನರ್ ಗಳನ್ನು ಕೊಂಡೊಯ್ಯಲಾಗಿದೆ ಎಂದು ಸ್ಟಾಲಿನ್  ಆರೋಪಿಸಿ ಇದಕ್ಕೆಕೆಲವು ನಿದರ್ಶನ ನೀಡಿದರು.

ರಾಮನಾಥಪುರಂನಲ್ಲಿ, 31 ಜನರು ಎರಡು ಲ್ಯಾಪ್‌ಟಾಪ್‌ಗಳೊಂದಿಗೆ ಸ್ಟ್ರಾಂಗ್ ರೂಮ್ ಕ್ಯಾಂಪಸ್‌ಗೆ ಪ್ರವೇಶಿಸಿದ್ದರು. ವಿಚಾರಣೆಯ ವೇಳೆ, ಇವಿಎಂಗಳನ್ನು ಸಂಗ್ರಹಿಸಿರುವ ಮಹಡಿಯಲ್ಲಿ ಲಭ್ಯವಿರುವ ಕೆಲವು ಕಂಪ್ಯೂಟರ್‌ಗಳನ್ನು ನಿರ್ವಹಿಸಲು ಅವರು ಸ್ಟ್ರಾಂಗ್ ರೂಮ್ ಗೆ  ಪ್ರವೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಮತದಾನ ಮಾಡಿದ ಇವಿಎಂ ಅನ್ನು ಸಂಗ್ರಹಿಸಿರುವ ನೇವೆಲಿ ಅಣ್ಣಾ ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಮೂವರು ಕಂಪ್ಯೂಟರ್-ತಜ್ಞರನ್ನು ಸಕಾರಣವಿಲ್ಲದೆ ಅಧಿಕಾರಿಗಳು ನೀಡಿದ ಪಾಸ್ ನೊಂದಿಗೆ ಆವರಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಯಿತು ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಇವಿಎಂ ಹಾಗೂ ಸ್ಟ್ರಾಂಗ್ ರೂಮ್ ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಯಾವುದೇ ಅನಧಿಕೃತ ವ್ಯಕ್ತಿಗೆ ಸ್ಟ್ರಾಂಗ್ ರೂಮ್ ಗಳಿಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಡಿಎಂಕೆ ಮುಖ್ಯಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News