ಬ್ರಿಟನ್‌ನ ಆಶ್ಡನ್ ಪ್ರಶಸ್ತಿ ಆಯ್ಕೆಪಟ್ಟಿಯಲ್ಲಿ ಮಣಿಪಾಲದ ಬಿವಿಟಿ
ಉಡುಪಿ, ಎ.16: ಜಾಗತಿಕ ಮಟ್ಟದಲ್ಲಿ ಸುಸ್ಥಿರ ಇಂಧನ ಹಾಗೂ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ಬ್ರಿಟನ್‌ನ ಆಶ್ಡೆನ್ ಸಂಸ್ಥೆ ಪ್ರತಿವರ್ಷ ಈ ಕ್ಷೇತ್ರದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಸಂಸ್ಥೆಗಳಿಗೆ ನೀಡುವ ಪ್ರತಿಷ್ಠಿತ ‘ಆಶ್ಡೆನ್ ಪ್ರಶಸ್ತಿ-2021’ಕ್ಕಾಗಿ ಪ್ರಕಟಿಸಿದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಸ್ಥಾನ ಪಡೆದಿದೆ.
2001ರಲ್ಲಿ ಸ್ಥಾಪನೆಯಾದ ಲಂಡನ್ ಮೂಲದ ಈ ಸಂಸ್ಥೆ ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆ, ಹವಾಮಾನ ಸ್ಥಿತ್ಯಂತರಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಬಾರಿಯ ಪ್ರಶಸ್ತಿಗೆ ಜಾಗತಿಕ ಮಟ್ಟದಲ್ಲಿ 800ಕ್ಕೂ ಅಧಿಕ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಇವುಗಳಲ್ಲಿ ಒಟ್ಟು 38 ಸಂಸ್ಥೆಗಳನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಮಣಿಪಾಲದ ಬಿವಿಟಿಯೂ ಒಂದಾಗಿದೆ.
ಸುಸ್ಥಿರ ಇಂಧನ ಹಾಗೂ ಗ್ರಾಮೀಣ ಕೌಶಲ ವಿಭಾಗದಲ್ಲಿ ಬಿವಿಟಿ ಮಾಡಿರುವ ಸೇವೆಯನ್ನು ಆಯ್ಕೆಯ ವೇಳೆ ಪರಿಗಣಿಸಲಾಗಿದೆ ಎಂದು ಬಿವಿಟಿ ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆಯ ಉನ್ನತ ಮಟ್ಟದ ತಜ್ಞರ ತಂಡವೊಂದು ಆಯ್ಕೆಯಾದ ಎಲ್ಲಾ 38 ಸಂಸ್ಥೆಗಳಿಗೆ ಭೇಟಿ ನೀಡಿ, ಕಠಿಣ ಮೌಲ್ಯಮಾಪನದ ಮೂಲಕ ಮುಂದಿನ ನವೆಂಬರ್ ವೇಳೆಗೆ ಅಂತಿಮ ವಿಜೇತರನ್ನು ಘೋಷಿಸಲಿದೆ.
ಭಾರತದ ಮಹಿಳಾ ಹೌಸಿಂಗ್ ಟ್ರಸ್ಟ್, ಸೌತ್ ಎಷ್ಯನ್ ಫೋರಂ ಫಾರ್ ದಿ ಎನ್ವರೋನ್‌ಮೆಂಟ್, ಕೃಷಿ ಜನನಿ ಸೇರಿದಂತೆ ಕೆನ್ಯ, ಉಗಾಂಡ, ಸೋಮಾಲಿಯಾ, ನೆದರ್ಲಂಡ್, ಪಾಕಿಸ್ತಾನ, ಕಾಂಗೋ, ಸೂಡಾನ್, ಈಕ್ವೆಡಾರ್, ಬ್ರೆಜಿಲ್ ದೇಶಗಳ ಸಂಸ್ಥೆಗಳೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯ ಅಂತಿಮ ಪಟ್ಟಿಗೆ ಆಯ್ಕೆಯಾಗಿವೆ.
ಸುಸ್ಥಿರ ಇಂಧನ (ಸೋಲಾರ್)ಕ್ಕೆ ಸಂಬಂಧಿಸಿದಂತೆ ಸಾಲ ನೀಡಲು 14,000 ಬ್ಯಾಂಕ್ ಉದ್ಯೋಗಿಗಳಿಗೆ ಬಿವಿಟಿ ತರಬೇತು ನೀಡಿರುವುದನ್ನು ಪ್ರಶಸ್ತಿ ಆಯ್ಕೆಗೆ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆಶ್ಡನ್ ಸಂಸ್ಥೆ ತಿಳಿಸಿದೆ.
ಜನರ ಸಬಲೀಕರಣದ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಭಾರತೀಯ ವಿಕಾಸ ಟ್ರಸ್ಟ್ ಮಾಜಿ ಕೇಂದ್ರ ಸಚಿವ ದಿ.ಟಿ.ಎ.ಪೈ ಅವರಿಂದ ಸ್ಥಾಪನೆಗೊಂಡಿತ್ತು. ಇದಕ್ಕಾಗಿ ಸಂಸ್ಥೆ ಮೊದಲು ಸೌರವಿದ್ಯುತ್‌ನ್ನು ಹಳ್ಳಿ ಹಳ್ಳಿಗಳಲ್ಲಿ ಜನಪ್ರಿಯಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಂಡಿತ್ತು.
ಗ್ರಾಮೀಣ ಪ್ರದೇಶಗಳಲ್ಲಿರುವ ಬಡತನದ ನಿವಾರಣೆಯಲ್ಲಿ ಸೌರವಿದ್ಯುತ್ ಪಾತ್ರ ಮಹತ್ವದ್ದೆಂಬುದನ್ನು ಅರಿತುಕೊಂಡ ಬಿವಿಟಿ, 2001ರಿಂದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇವುಗಳ ಪ್ರಯೋಜನವನ್ನು 50,000ಕ್ಕೂ ಅಧಿಕ ಮಂದಿ ಪಡೆದುಕೊಂಡಿದ್ದಾರೆ. ಸೌರವಿದ್ಯುತ್‌ಗೆ ಸಾಲ ನೀಡುವಲ್ಲಿ ಬ್ಯಾಂಕರ್‌ಗಳಿಗೆ 500ಕ್ಕೂ ಅಧಿಕ ತರಬೇತಿ ಶಿಬಿರಗಳನ್ನು ಆಯೋಜಿಸಿದೆ. ಇವುಗಳ ಪರಿಣಾಮ ಇಂದು ಆರು ಲಕ್ಷಕ್ಕೂ ಅಧಿಕ ಮಂದಿ ಸೋಲಾರ್ ಬೆಳಕಿನ ಮೂಲಕ ಸುಸ್ಥಿರ ಇಂಧನದ ಬಳಕೆದಾರರಾಗಿದ್ದಾರೆ ಎಂದು ಬಿವಿಟಿ ಪ್ರಕಟಣೆಯಲ್ಲಿ ತಿಳಿಸಿದೆ.