×
Ad

ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಿ: ಉಡುಪಿ ಜಿಲ್ಲಾಧಿಕಾರಿ

Update: 2021-04-16 21:31 IST

ಉಡುಪಿ, ಎ.16: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು, ಕರ್ತವ್ಯದಲ್ಲಿ ಯಾವುದೇ ಲೋಪಗಳಾಗದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಈ ಹಿಂದೆ ರಚಿಸಲಾಗಿದ್ದ ಎಲ್ಲಾ ಸಮಿತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪುನರ್‌ರಚಿಸಲಾಗಿದ್ದು, ಎಲ್ಲಾ ಅಧಿಕಾರಿಗಳು ತಮಗೆ ವಹಿಸಲಾಗಿರುವ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸುವಂತೆ ಡಿಸಿ ಸೂಚಿಸಿದರು.

ಜಿಲ್ಲೆಯಲ್ಲಿ ಸೋಂಕಿತರ ಪತ್ತೆ ಹಚ್ಚುವ ಕಾರ್ಯ ಉತ್ತಮವಾಗಿ ನಡೆಯುತ್ತಿದೆ. ಕೋವಿಡ್ ಪರೀಕ್ಷೆಗಾಗಿ ರಚಿಸಿರುವ ತಂಡದ ಅಧಿಕಾರಿಗಳು ನಿಗದಿತ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕು. ಕೋವಿಡ್ ಪರೀಕ್ಷೆ ನಡೆಸಲು ವಿರೋಧಿಸುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚಿಸಿದ ಅವರು, ಎಲ್ಲಾ ತಹಶೀಲ್ದಾರ್‌ಗಳು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ತಂಡ ರಚಿಸಿಕೊಂಡು, ಕೋವಿಡ್ ಪರೀಕ್ಷೆ ನಡೆಸುವ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.

ಸುರಕ್ಷತಾ ಅಂತರ ಪಾಲನೆ, ಮಾಸ್ಕ್ ಧರಿಸದವರ ವಿರುದ್ದ ದಂಡ ವಿಧಿಸುವ ಅಧಿಕಾರವನ್ನು ನೀಡಿದ್ದರೂ ಹಲವು ಅಧಿಕಾರಿಗಳು ದಂಡ ವಿಧಿಸದಿರುವುದರ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಕಾರ್ಯಚರಣೆಯನ್ನು ತೀವ್ರಗೊಳಿಸುವಂತೆ ಸೂಚನೆ ನೀಡಿದರು.

ಕೋವಿಡ್ ಸಮಸ್ಯೆಗಳ ಕುರಿತು ದಿನದ 24 ಗಂಟೆಗಳ ಕಂಟ್ರೋಲ್ ರೂಂ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಕ್ವಾರಂಟೈನ್ ವಾಚ್ ಶೇ.100 ಸಾಧನೆ ಅಗಬೇಕು. ಹೋಂ ಐಸೋಲೇಶನ್‌ನಲ್ಲಿ ಇರುವವರನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು ಎಂದರು.

ಐಎಲ್‌ಐ ಹಾಗೂ ಸಾರಿ ಪ್ರಕರಣಗಳ ಕುರಿತು ಮಾಹಿತಿ ನೀಡದ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳಿ. ಮೃತದೇಹಗಳ ವಿಲೇವಾರಿ ಸಂದರ್ದಲ್ಲಿ ಯಾವುದೇ ಗೊಂದಲಗಳು ಆಗದಂತೆ ಎಚ್ಚರವಹಿಸಬೇಕು. ಈ ಬಗ್ಗೆ ನಿಗಾವಹಿಸಲು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಜಿಲ್ಲೆಗೆ ಅಗತ್ಯವಿರುವ ಲಸಿಕೆ, ಆಕ್ಸಿಜಿನ್, ಪಿಪಿಇ ಕಿಟ್, ಮಾಸ್ಕ್ ಗಳು ಅಗತ್ಯ ಸಂಗ್ರಹವಿರುವಂತೆ ನೋಡಿಕೊಳ್ಳಿ, ಸಾಕಷ್ಟು ಮುಂಚಿತವಾಗಿ ಇವುಗಳ ದಾಸ್ತಾನು ಪಡೆಯಿರಿ ಎಂದು ಅಧಿಕಾರಿಗಳಿಗೆ ಜಿ.ಜಗದೀಶ್ ಸೂಚಿಸಿದರು.

ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯತಂಡಗಳನ್ನು ರಚಿಸಿದ ಜಿಲ್ಲಾಧಿಕಾರಿ ಎಲ್ಲರಿಗೂ ಜವಾಬ್ದಾರಿಗಳು ವಹಿಸಿದರು. ಎಲ್ಲಾ ತಂಡಗಳಿಗೆ ಅಗತ್ಯವಿರುವ ಸಿಬ್ಬಂದಿಗಳನ್ನು ಒದಗಿಸಲಾಗುವುದು. ಎಲ್ಲಾ ತಂಡಗಳು ಸಂಘಟಿತವಾಗಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಹಾಗೂ ಪ್ರತಿ ದಿನದ ಕಾರ್ಯ ಪ್ರಗತಿಯ ವಿವರಗಳನ್ನು ನೀಡಬೆಕು ಎಂದು ಡಿಸಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಟ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರು, ಉಪ ವಿಬಾಗಾಧಿಕಾರಿ ರಾಜು, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಡಿಹೆಚ್‌ಓ ಡಾ. ಸುದೀರ್‌ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ ಭಟ್, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News