ನ್ಯಾಯಾಧೀಶರ ನೇಮಕ: ಕೊಲಿಜಿಯಂ ಶಿಫಾರಸಿಗೆ ಪ್ರತಿಕ್ರಿಯಿಸಲು ವೇಳಾಪಟ್ಟಿ ನಿಗದಿಗೆ ಕೇಂದ್ರಕ್ಕೆ ಸೂಚನೆ

Update: 2021-04-16 16:14 GMT

ಹೊಸದಿಲ್ಲಿ, ಎ.16: ನ್ಯಾಯಾಧೀಶರ ಹುದ್ದೆ ಭರ್ತಿಗೆ ಕೊಲಿಜಿಯಂ ನೀಡುವ ಶಿಫಾರಸಿಗೆ ಪ್ರತಿಕ್ರಿಯಿಸುವ ಕುರಿತು ವೇಳಾಪಟ್ಟಿಯನ್ನು ನಿಗದಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ನ್ಯಾಯಾಧೀಶರ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿರುವ ಹೆಸರಿನ ಪಟ್ಟಿಯ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಯಾಕೆ ಬರಲಿಲ್ಲ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರಕಾರವನ್ನು ಪ್ರಶ್ನಿಸಿತು. 

ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಿಸಲು 10 ನ್ಯಾಯಾಧೀಶರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದ್ದು, ಇವರಲ್ಲಿ ಯಾರನ್ನು ನೇಮಿಸಬೇಕೆಂದು 3 ತಿಂಗಳೊಳಗೆ ನಿರ್ಧಾರಕ್ಕೆ ಬರುವುದಾಗಿ ಹೇಳಿದರು. 

ಈ ಹೇಳಿಕೆಯನ್ನು ತನ್ನ ಆದೇಶದಲ್ಲಿ ದಾಖಲಿಸಿಕೊಳ್ಳುವುದಾಗಿ ತಿಳಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಕೊಲಿಜಿಯಂನ ಶಿಫಾರಸು 6 ತಿಂಗಳಿಂದ ಬಾಕಿಯಿದೆ. ಈ ಬಗ್ಗೆ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ ಪ್ರತೀ ಹಂತದಲ್ಲೂ ಕೈಗೊಳ್ಳಬೇಕಿರುವ ಪ್ರಕ್ರಿಯೆಗೆ ವೇಳಾಪಟ್ಟಿ ನಿಗದಿಯಾಗಬೇಕು ಮತ್ತು ವೇಳಾಪಟ್ಟಿಯ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಮಾಹಿತಿ ನೀಡಬೇಕು ಎಂದು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News