×
Ad

ಉಡುಪಿ: ಅಕ್ರಮ ಮರಳುಗಾರಿಕೆ ತಡೆಗಟ್ಟಲು ಪೊಲೀಸ್ ಅಧಿಕಾರಿಗಳ ಸಭೆ

Update: 2021-04-16 21:46 IST

ಉಡುಪಿ, ಎ.16: ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಪಡೆಯದೇ ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬ್ರಹ್ಮಾವರ ವೃತ್ತ ಕಚೇರಿಯಲ್ಲಿ ಸಭೆಯೊಂದು ನಡೆಯಿತು.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಳಹಳ್ಳಿ ಗ್ರಾಮದ ಮರತ್ತೂರು, ಕೋಣಿಹರ ಮತ್ತು ಕೈಲ್ಕೆರೆ ಎಂಬಲ್ಲಿ ವಾರಾಹಿ ನದಿಯಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯತ್ತಿರುವ ಬಗ್ಗೆ ದೂರಿನ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.

ಮೊಳಹಳ್ಳಿ ಗ್ರಾಪಂನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭಾವನಾ, ಗ್ರಾಮ ಕರಣಿಕರಾದ ಅನಿಲ್ ಕುಮಾರ್, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸದಾನಂದ ಎಸ್.ನಾಯ್ಕಾ, ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ, ಕೋಟ ಠಾಣಾ ಪಿಎಸ್‌ಐ ಪುಷ್ಪಾ, ಬ್ರಹ್ಮಾವರ ಠಾಣಾ ಪಿಎಸ್‌ಐ ಗುರುನಾಥ ಹಾದಿಮನಿ ಇವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಮೊಳಹಳ್ಳಿ ಗ್ರಾಪಂ ವ್ಯಾಪ್ತಿಯ ಮರತ್ತೂರು, ಕೋಣಿಹರ ಹಾಗೂ ಕೈಲ್ಕೆರೆಯಲ್ಲಿ ಜಂಟಿಯಾಗಿ ಚೆಕ್‌ಪೋಸ್ಟ್ ರಚನೆ, ಹೊರರಾಜ್ಯಗಳಿಂದ ಬಂದಿರುವ ಕೂಲಿಕಾರ್ಮಿಕರು ಪಂಚಾಯತ್ ವ್ಯಾಪ್ತಿಯಲ್ಲಿ ಶೆಡ್ ನಿರ್ಮಿಸದಂತೆ ತಡೆ ಹಾಗೂ ಕಂದಾಯ, ಗ್ರಾಪಂ, ಗಣಿ ಮತ್ತು ಭೂವಿಜ್ಞಾನ ಹಾಗೂ ಪೊಲೀಸ್ ಇಲಾಖೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಕ್ರಮ ಮರಳುಗಾರಿಕೆಯನ್ನು ನಿಲ್ಲಿಸಲು ಕಟ್ಟುನಿಟ್ಟಿನ ಸೂಚನೆ ಹಾಗೂ ಸೂಕ್ತ ನಿರ್ದೇಶನಗಳನ್ನು ಸಭೆಯಲ್ಲಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News