×
Ad

ಉಡುಪಿ: ವ್ಯಾಯಾಮ ಶಾಲೆಯಲ್ಲಿ ಕಳವಿಗೆ ವಿಫಲ ಯತ್ನ

Update: 2021-04-16 23:09 IST

ಉಡುಪಿ, ಎ.16: ನಗರದ ಶಿವಳ್ಳಿ ಗ್ರಾಮದ ತಾಂಗದಗಡಿ ಬಳಿಯ ವೀರ ಮಾರುತಿ ವ್ಯಾಯಾಮ ಶಾಲೆಯಲ್ಲಿ ಕಳೆದ ರಾತ್ರಿ ಕಳವು ನಡೆಸುವುದಕ್ಕೆ ವಿಫಲ ಪ್ರಯತ್ನ ನಡೆಸಿರುವ ಖದೀಮರು, ಸ್ಥಳದಲ್ಲೇ ಕಾರನ್ನು ಬಿಟ್ಟು ಪರಾರಿಯಾಗಿರುವ ಘಟನೆ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.

ಮಂಗಳೂರಿನಲ್ಲಿ ರಿಜಿಸ್ಟರ್ ಆಗಿರುವ ಕೆಎ 19, ಎಂಕೆ 3701 ನಂಬರ್‌ನ ನೀಲಿಬಣ್ಣದ ಕಾರು ಘಟನೆ ನಡೆದ ಸ್ಥಳದಲ್ಲಿ ಕಂಡುಬಂದಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬೆನ್ನು ಹತ್ತಿದ ಪೊಲೀಸರಿಗೆ ಕೆಲವು ಮಹತ್ವದ ಮಾಹಿತಿಗಳು ದೊರಕಿವೆ.

ಶುಕ್ರವಾರ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಗೌತಮ್ ಕುಮಾರ್ ಎಂಬವರಿಗೆ ತಾಂಗದಗಡಿಯ ವ್ಯಾಯಾಮ ಶಾಲೆಯ ಗೇಟ್ ತೆರೆದ ಶಬ್ದ ಕೇಳಿಸಿದ್ದು, ಅವರು ಸ್ನೇಹಿತರೊಂದಿಗೆ ಅಲ್ಲಿಗೆ ಆಗಮಿಸಿದ್ದರು. ಈ ವೇಳೆ ವ್ಯಾಯಾಮ ಶಾಲೆಯ ದೇವಸ್ಥಾನದ ಮುಖ್ಯ ದ್ವಾರದ ಬಾಗಿಲಿನ ಬೀಗವನ್ನು ಯಾರೋ ಒಡೆಯತ್ತಿರುವುದು ಕಂಡು ಬಂದಿದ್ದು, ಇವರನ್ನು ಕಂಡ ಕಳ್ಳರು ತಾವು ಬಂದ ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ.

ಕಾರು ಬಿಟ್ಟು ಪರಾರಿಯಾಗಿರುವ ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ವ್ಯಾಯಾಮ ಶಾಲೆಯಲ್ಲಿ ಕಳವಿಗೆ ಯತ್ನಿಸಿದ್ದು ಬಾಡಿಗೆ ಕಾರೆಂದು ತಿಳಿದು ಬಂದಿದೆ. ಮಂಗಳೂರಿನ ಪ್ರೀತಮ್ ಎಂಬುವವರಿಂದ ಬಾಡಿಗೆ ಪಡೆದುಕೊಂಡಿದ್ದ ಖದೀಮರು ಅದೇ ಕಾರಿನಲ್ಲಿ ಉಡುಪಿಗೆ ಬಂದು ಕಳವಿಗೆ ಪ್ರಯತ್ನಿಸಿದ್ದಾರೆ. ಆದರೆ ಕಾರಿನ ಮೂಲ ಮಾಲಕ ಸೌರಬ್ ಎಂಬವರು ಎಂದು ತಿಳಿದುಬಂದಿದೆ. ಕಾರು ದಕ್ಷಿಣ ಕನ್ನಡದಿಂದ ಉಡುಪಿಗೆ ಬರುವಾಗ ಸಿಗುವ 2 ಟೋಲ್‌ಗೇಟ್ ಪಾಸಾಗಿರುವುದಕ್ಕೆ ಶುಲ್ಕ ಕಟ್ಟಿರುವ ರಶೀದಿಯೂ ಕಾರಿನಲ್ಲಿ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News