ಇಂಡಿಯಾನಪೊಲಿಸ್ ಹತ್ಯಾಕಾಂಡ: ಮೃತಪಟ್ಟವರಲ್ಲಿ ನಾಲ್ವರು ಸಿಖ್ಖರು

Update: 2021-04-18 15:20 GMT

 ಇಂಡಿಯಾನಪೊಲಿಸ್ (ಅಮೆರಿಕ), ಎ. 17: ಅಮೆರಿಕದ ಇಂಡಿಯಾನ ರಾಜ್ಯದ ರಾಜಧಾನಿ ಇಂಡಿಯಾನಪೊಲಿಸ್‌ನಲ್ಲಿರುವ ಫೆಡ್‌ಎಕ್ಸ್ ಕಂಪೆನಿಯ ಆವರಣದಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ನಾಲ್ವರು ಸಿಖ್ಖರು ಸೇರಿದ್ದಾರೆ.

  ಕಂಪೆನಿಯ ಆವರಣದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ. ಇದು ಈ ವರ್ಷ ಇಂಡಿಯಾನಪೊಲಿಸ್ ನಗರವೊಂದರಲ್ಲೇ ನಡೆದ ಕನಿಷ್ಠ ಮೂರನೇ ಹತ್ಯಾಕಾಂಡವಾಗಿದೆ.

ಇಂಡಿಯಾನಪೊಲಿಸ್ ಮೆಟ್ರೊಪಾಲಿಟನ್ ಪೊಲೀಸ್ ಇಲಾಖೆಯು ಶುಕ್ರವಾರ ತಡ ರಾತ್ರಿ ಮೃತರ ಹೆಸರುಗಳನ್ನು ಬಿಡುಗಡೆಮಾಡಿದೆ. ಆ ಪೈಕಿ ಮೃತ ಸಿಖ್ಖರ ಹೆಸರುಗಳು ಇಂತಿವೆ: ಅಮರ್‌ಜೀತ್ ಜೋಹಲ್ (66), ಜಸ್ವಿಂದರ್ ಕೌರ್ (64), ಅಮರ್‌ಜೀತ್ ಸೆಖೋನ್ (48) ಮತ್ತು ಜಸ್ವಿಂದರ್ ಸಿಂಗ್ (68). ಈ ಪೈಕಿ ಮೊದಲ ಮೂವರು ಮಹಿಳೆಯರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರ ಪೈಕಿ ಸುಮಾರು 90 ಶೇಕಡದಷ್ಟು ಮಂದಿ ಭಾರತೀಯ-ಅಮೆರಿಕನ್ನರು, ಅದರಲ್ಲೂ ಮುಖ್ಯವಾಗಿ ಸಿಖ್ಖರು.

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಂತಕ

  ಹಂತಕನನ್ನು 19 ವರ್ಷದ ಬ್ರಾಂಡನ್ ಹೋಲ್ ಎಂಬುದಾಗಿ ಗುರುತಿಸಲಾಗಿದೆ. ಹಂತಕನು ಪೊಲೀಸರನ್ನು ನೋಡಿ ತನ್ನ ಮೇಲೆಯೇ ಗುಂಡು ಹಾರಿಸಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರಾದರೂ, ತನಗೆ ತಾನೇ ಹಾರಿಸಿಕೊಂಡ ಗುಂಡಿನಿಂದಾಗಿ ಮೃತಪಟ್ಟಿದ್ದಾನೆ.

ಆತ ಹತ್ಯಾಕಾಂಡ ನಡೆಸಲು ಕಾರಣವೇನು ಎನ್ನುವುದು ತಿಳಿದುಬಂದಿಲ್ಲ.

 ಹಂತಕ ಹೋಲ್ ಈ ಹಿಂದೆ ಫೆಡ್‌ಎಕ್ಸ್ ಕಂಪೆನಿಯ ಉದ್ಯೋಗಿಯಾಗಿದ್ದನು. ಆತ ಈ ಹಿಂದೆಯೂ ಎಫ್‌ಬಿಐ ಕಣ್ಗಾವಲಿನಲ್ಲಿದ್ದನು. 2020ರಲ್ಲಿ ಎಫ್‌ಬಿಐ ಅಧಿಕಾರಿಗಳು ಅವನ ವಿಚಾರಣೆಯನ್ನೂ ಮಾಡಿದ್ದರು. ಆದರೆ, ಆತ ‘ಜನಾಂಗೀಯ ಪ್ರೇರಿತ ಹಿಂಸಾತ್ಮಕ ಉಗ್ರವಾದಿ ಸಿದ್ಧಾಂತ’ ಹೊಂದಿಲ್ಲ ಎಂಬ ನಿರ್ಧಾರಕ್ಕೆ ಅವರು ಬಂದಿದ್ದರು.

ರಾಷ್ಟ್ರೀಯ ಮುಜುಗರ: ಬೈಡನ್

ಇಂಡಿಯಾನಪೊಲಿಸ್ ನಗರದಲ್ಲಿ ನಡೆದಿರುವ ಹತ್ಯಾಕಾಂಡವು ‘ರಾಷ್ಟ್ರೀಯ ಮುಜುಗರ’ವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ.

‘‘ಇದು ಕೊನೆಗೊಳ್ಳಬೇಕು. ಇದು ರಾಷ್ಟ್ರೀಯ ಮುಜುಗರವಾಗಿದೆ’’ ಎಂದು ವಾಶಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಜಪಾನ್ ಪ್ರಧಾನಿ ಯೊಶಿಹಿಡ ಸುಗ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೈಡನ್ ಹೇಳಿದರು.

ಅಮೆರಿಕದಲ್ಲಿ ಸಾಮೂಹಿಕ ಹತ್ಯಾಕಾಂಡಗಳು ಹೆಚ್ಚುತ್ತಿರುವಂತೆಯೇ, ಬಂದೂಕು ಹಿಂಸಾಚಾರವನ್ನು ಕೊನೆಗೊಳಿಸುವ ಅಗಾಧ ಒತ್ತಡವನ್ನು ಬೈಡನ್ ಎದುರಿಸುತ್ತಿದ್ದಾರೆ.

ಮೃತರ ಗೌರವಾರ್ಥ ಶ್ವೇತಭವನ ಮತ್ತು ಕೇಂದ್ರ ಸರಕಾರದ ಕಟ್ಟಡಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸುವಂತೆ ಬೈಡನ್ ಆದೇಶ ಹೊರಡಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ಎಲ್ಲ ನೆರವು: ಭಾರತ

ಸ್ಥಳೀಯ ಅಧಿಕಾರಿಗಳು, ಸಂತ್ರಸ್ತ ಕುಟುಂಬಗಳು ಮತ್ತು ಸಮುದಾಯದ ನಾಯಕರಿಗೆ ಅಗತ್ಯವಿರುವ, ‘ಸಾಧ್ಯವಿರುವ ಎಲ್ಲ ನೆರವನ್ನು’ ಭಾರತ ನೀಡುವುದು ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಶನಿವಾರ ಹೇಳಿದ್ದಾರೆ.

‘‘ಇಂಡಿಯಾನಪೊಲಿಸ್‌ನಲ್ಲಿರುವ ಫೆಡ್‌ಎಕ್ಸ್ ಕಂಪೆನಿಯಲ್ಲಿ ನಡೆದಿರುವ ಗುಂಡಿನ ದಾಳಿಯಿಂದ ತೀವ್ರವಾಗಿ ಆಘಾತಗೊಂಡಿದ್ದೇನೆ. ಸಂತ್ರಸ್ತರಲ್ಲಿ ಭಾರತೀಯ ಅಮೆರಿಕನ್ ಸಿಖ್ ಸಮುದಾಯಕ್ಕೆ ಸೇರಿದವರಿದ್ದಾರೆ. ಶಿಕಾಗೊದಲ್ಲಿರುವ ನಮ್ಮ ಕೌನ್ಸುಲೇಟ್ ಜನರಲ್ ಇಂಡಿಯಾನಪೊಲಿಸ್ ಮೇಯರ್ ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ಸಮುದಾಯದ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಸಾಧ್ಯವಿರುವ ಎಲ್ಲ ನೆರವನ್ನು ನೀಡುತ್ತೇವೆ’’ ಎಂಬುದಾಗಿ ಜೈಶಂಕರ್ ಶನಿವಾರ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News