ಉಡುಪಿಯ ಪರವಾನಿಗೆ ಭೂಮಾಪಕರ ಮುಷ್ಕರ ಸೋಮವಾರ ವಾಪಾಸ್?

Update: 2021-04-17 17:18 GMT

ಉಡುಪಿ, ಎ.17: ರಾಜ್ಯ ಸಂಘದ ಕರೆಯಂತೆ ಕಳೆದೆರಡು ತಿಂಗಳುಗಳಿಂದ ಪರವಾನಿಗೆ ಭೂಮಾಪಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರ ಉಡುಪಿ ಜಿಲ್ಲೆಯಲ್ಲಿ ಸೋಮವಾರ ಕೊನೆಗೊಳ್ಳುವ ಹಾಗೂ ಭೂಮಾಪಕರು ಕೆಲಸಕ್ಕೆ ಹಿಂದಿರುಗುವ ಸಾಧ್ಯತೆ ಇದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಪರವಾನಿಗೆ ಭೂಮಾಪಕರು ಕಳೆದೆರಡು ತಿಂಗಳುಗಳಿಂದ ನಡೆಸುತ್ತಿರುವ ಮುಷ್ಕರ ದಿಂದಾಗಿ ಉಡುಪಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದುಕೊಂಡಿವೆ. ಇದರಿಂದ ಜಿಲ್ಲೆಯಲ್ಲಿ ಜನರು ತೀವ್ರ ತೊಂದರೆಗೊಳಗಾಗಿದ್ದಾರಲ್ಲದೇ, ಕಂದಾಯ ಇಲಾಖೆಯ ಕೆಲಸವೂ ಸ್ಥಗಿತಗೊಳ್ಳುವಂತಾಗಿದೆ ಎಂದು ಶಾಸಕ ಭಟ್ ತಮ್ಮ ಕಚೇರಿಯಲ್ಲಿ ರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾವು ಉಡುಪಿ ಜಿಲ್ಲಾ ಲೈಸನ್ಸ್ ಸರ್ವೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ರಾಜ್ಯಮಟ್ಟ ದಲ್ಲಿ ತೀರ್ಮಾನಗೊಳ್ಳುವ ಬೇಡಿಕೆಗಳನ್ನು ಹೊರತು ಪಡಿಸಿ ಸ್ಥಳೀಯವಾದ ಕೆಲವು ಬೇಡಿಕೆಗಳನ್ನು ಈಡೇರಿಸಲು ಕಂದಾಯ ಸಚಿವ ಅಶೋಕ್ ಅವರೊಂದಿಗೆ ಮಾತನಾಡಿದ್ದು, ಅವರು ಈ ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ ಎಂದರು.

ಜಿಲ್ಲೆಯ ಭೂಮಾಪಕರು ಸೋಮವಾರದೊಳಗೆ ಮುಷ್ಕರ ವಾಪಾಸು ತೆಗೆದುಕೊಂಡರೆ, ಅವರನ್ನು ಮುಂದಿನ ಗುರುವಾರ ಸಚಿವ ಅಶೋಕ್‌ರೊಂದಿಗೆ ಮಾತುಕತೆಗೆ ಕರೆದೊಯ್ಯುವುದಾಗಿ ಕೆ. ರಘುಪತಿ ಭಟ್ ಭರವಸೆ ನೀಡಿದರು. ಇದರಲ್ಲಿ ಅವರ ಬಾಕಿ ಉಳಿದ ಹಣದ ಪಾವತಿಯೂ ಸೇರಿದೆ. ಆದರೆ ಕನಿಷ್ಠ ಸಂಬಳ ನಿಗದಿ ಹಾಗೂ ನೌಕರಿಯ ಖಾಯಮಾತಿನ ಬೇಡಿಕೆ ರಾಜ್ಯಮಟ್ಟದ ಸಮಸ್ಯೆ ಎಂದು ಭಟ್ ತಿಳಿಸಿದರು.

ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ಅಧ್ಯಕ್ಷ ದುಷ್ಯಂತ್ ಕುಮಾರ್ ಅವರು ಮಾತನಾಡಿ, ಲೈಸೆನ್ಸ್ ಸರ್ವೆಯವರ ಸಮಸ್ಯೆಗಳಾದ ಪೋಡಿಮುಕ್ತ ಹಣ ಬಾಕಿ ಮತ್ತು 2013ರಿಂದ ಸಾರ್ವಜನಿಕರಿಂದ ಕಟ್ಟಿಸಿಕೊಂಡ ತತ್ಕಾಲ್ ಪೋಡಿ ಒಂದು ಕಡತಕ್ಕೆ ನೀಡಬೇಕಿದ್ದ 800 ರೂ.ವನ್ನು ಇದುವರೆಗೂ ಪಾವತಿಸಿಲ್ಲ. 11ಇ ನಕ್ಷೆ ಅಡಿಯಲ್ಲಿ ಅಲಿನೇಷನ್, ವಿಭಾಗ, ಕ್ರಯ, ಇಂತಹ ಅಳತೆ ಪ್ರಕರಣಗಳಲ್ಲಿ ವಿಲೇ ತಕರಾರುವಿನಲ್ಲಿ ಅಪ್ಲೋಡ್ ಮಾಡಿದ ಕಡತಗಳ ಸಂಭಾವನೆ ಬಾಕಿ ಉಳಿಸಿಕೊಳ್ಳಲಾಗಿದೆ. ಇದನ್ನು ನೀಡುವಂತೆ ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದರು.

ಇದೀಗ ತಮ್ಮ ಬಾಕಿ ಹಣವನ್ನು ನೀಡುವ ಭರವಸೆಯನ್ನು ಶಾಸಕರು, ಸಚಿವರೊಂದಿಗೆ ಚರ್ಚಿಸಿ ನೀಡಿದ್ದಾರೆ. ಅವರೊಂದಿಗೆ ಭೇಟಿಯ ಅವಕಾಶವನ್ನೂ ಕಲ್ಪಿಸಲಿದ್ದಾರೆ. ಈ ವಿಷಯವನ್ನು ಜಿಲ್ಲೆಯ 55 ಪರವಾನಿಗೆ ಭೂಮಾಪಕ ಸದಸ್ಯರಿರುವ ಸಂಘದ ಸಭೆಯ ಮುಂದಿರಿಸಿ ಅವರ ಅಭಿಪ್ರಾಯ ಪಡೆದು ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ದುಷ್ಯಂತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಭೂಮಾಪಕರ ಸಂಘದ ಶಶಿಕುಮಾರ್, ರವಿಕಾಂತ್ ಭಟ್, ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News