ದೇಶದಲ್ಲಿ ಒಂದೇ ದಿನ 2.6 ಲಕ್ಷ ದಾಟಿದ ಕೊರೋನ ಪಾಸಿಟಿವ್ ಪ್ರಕರಣ

Update: 2021-04-18 03:50 GMT

ಹೊಸದಿಲ್ಲಿ, ಎ.18: ದೇಶಾದ್ಯಂತ ಕೊರೋನ ಸ್ಫೋಟ ಮುಂದುವರಿದಿದ್ದು, ಎರಡು ಲಕ್ಷದ ಗಡಿದಾಟಿ ಕೇವಲ ಮೂರೇ ದಿನದಲ್ಲಿ ದೈನಿಕ ಪ್ರಕರಣಗಳ ಸಂಖ್ಯೆ 2.5 ಲಕ್ಷದ ಗಡಿ ದಾಟಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡಾ 1,500 ಸನಿಹಕ್ಕೆ ಬಂದಿದ್ದು, ಶನಿವಾರ ಇದುವರೆಗಿನ ಅತ್ಯಧಿಕ ಅಂದರೆ 1493 ಮಂದಿ ಜೀವ ಕಳೆದುಕೊಂಡಿದ್ದಾರೆ.

ಶುಕ್ರವಾರ ದಾಖಲಾಗಿದ್ದ 2.34 ಲಕ್ಷ ಪ್ರಕರಣಗಳಿಗೆ ಹೋಲಿಸಿದರೆ ಶನಿವಾರ ಪ್ರಕರಣಗಳ ಸಂಖ್ಯೆ 11.5% ಹೆಚ್ಚಿ 1,60,810ಕ್ಕೇರಿದೆ. ಸತತ ನಾಲ್ಕನೇ ದಿನ ಪ್ರಕರಣಗಳ ಸಂಖ್ಯೆ ಎರಡಂಕಿಯ ಪ್ರಮಾಣದಲ್ಲಿ ಏರುತ್ತಿದ್ದು, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಡಿಮೆಯಾಗುತ್ತಿಲ್ಲ ಎನ್ನುವುದರ ಸ್ಪಷ್ಟ ಸೂಚಕ ಇದಾಗಿದೆ.

ಅಕ್ಟೋಬರ್ 2ರ ಬಳಿಕ ಇದೇ ಮೊದಲ ಬಾರಿ ಸೋಂಕಿತರ ಸಾವಿನ ಸಂಖ್ಯೆ 1,000ದ ಗಡಿದಾಟಿ ಕೇವಲ ನಾಲ್ಕೇ ದಿನಗಳಲ್ಲಿ ಸಾವಿನ ಸಂಖ್ಯೆ 1,500ರ ಸನಿಹಕ್ಕೆ ಬಂದಿರುವುದು ಕೂಡಾ ಆತಂಕಕಾರಿ ಬೆಳವಣಿಗೆ. ಶನಿವಾರ ಮೊದಲ ಬಾರಿಗೆ ಸಾವಿನ ಸಂಖ್ಯೆ 1,300ರ ಗಡಿ ದಾಟಿತ್ತು. ಏಳು ದಿನಗಳ ದೈನಿಕ ಸರಾಸರಿ ಶನಿವಾರ 2 ಲಕ್ಷವನ್ನು ಮೀರಿದೆ. ಫೆಬ್ರವರಿ 11ರಂದು ಕನಿಷ್ಠ ಅಂದರೆ 11,364 ಸರಾಸರಿ ಪ್ರಕರಣಗಳು ದಾಖಲಾದ ಬಳಿಕ 65 ದಿನ ಸತತವಾಗಿ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಎಪ್ರಿಲ್ 17ರಂದು ಸರಾಸರಿ ದೈನಿಕ ಪ್ರಕರಣಗಳ ಸಂಖ್ಯೆ 2,03,949ಕ್ಕೇರಿದೆ.

ದೇಶಾದ್ಯಂತ 19 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದುವರೆಗಿನ ಗರಿಷ್ಠ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ 67,123, ದಿಲ್ಲಿಯಲ್ಲಿ 24,375 ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಕರ್ನಾಟಕ (17,489), ಛತ್ತೀಸ್‌ಗಢ (16,083), ಕೇರಳ (13,835), ಮಧ್ಯಪ್ರದೇಶ (11,489) ಐದಂಕಿ ಪ್ರಕರಣಗಳನ್ನು ದಾಖಲಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News