ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗೆ ಹತ್ಯೆ ಬೆದರಿಕೆ ಒಡ್ಡಿದ ನರ್ಸ್ ಬಂಧನ

Update: 2021-04-18 04:00 GMT

ಹೂಸ್ಟನ್, ಎ.18: ಅಮೆರಿಕದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಆರೋಪದಲ್ಲಿ 39 ವರ್ಷ ವಯಸ್ಸಿನ ನರ್ಸ್ ಒಬ್ಬಳನ್ನು ಫ್ಲೋರಿಡಾದಲ್ಲಿ ಬಂಧಿಸಲಾಗಿದೆ.

ಅಮೆರಿಕದ ರಹಸ್ಯ ಸೇವೆಗಳ ವಿಭಾಗ ತನಿಖೆ ನಡೆಸಿದ ಬಳಿಕ ನಿವಿಯೇನ್ ಪೆಟಿಟ್ ಫೆಲ್ಪ್ಸ್ ಎಂಬಾಕೆಯನ್ನು ಬಂಧಿಸಲಾಗಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಕಮಲಾ ಹ್ಯಾರಿಸ್ (56) ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಮಹಿಳೆ, ಮೊದಲ ಕಪ್ಪು ಅಮೆರಿಕನ್ ಮಹಿಳೆ ಮತ್ತು ದಕ್ಷಿಣ ಏಶ್ಯ ಮೂಲದ ಮೊಟ್ಟಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಆರೋಪಿ ಮಹಿಳೆ ಪ್ರಜ್ಞಾಪೂರ್ವಕವಾಗಿ ಮತ್ತು ಇಚ್ಛಾಪೂರ್ವಕವಾಗಿ ಅಮೆರಿಕದ ಉಪಾಧ್ಯಕ್ಷೆಯನ್ನು ಹತ್ಯೆ ಮಾಡುವುದಾಗಿ ಫೆಬ್ರವರಿ 13ರಿಂದ ಫೆಬ್ರವರಿ 18ರವರೆಗೂ ಬೆದರಿಕೆ ಹಾಕುತ್ತಿದ್ದರು ಎಂದು ಅಮೆರಿಕದ ಫ್ಲೋರಿಡಾ ಜಿಲ್ಲಾ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಕ್ರಿಮಿನಲ್ ದೂರಿನಲ್ಲಿ ವಿವರಿಸಲಾಗಿದೆ. 2001ರಿಂದ ಜಾಕ್ಸನ್ ಹೆಲ್ತ್ ಸಿಸ್ಟಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಹಿಳೆ, ಹ್ಯಾರಿಸ್‌ಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ ಎಂದು ಎನ್‌ಬಿಸಿಮಿಯಾಮಿ.ಕಾಮ್ ವರದಿ ಮಾಡಿದೆ.

ಆರೋಪಿ ಮಹಿಳೆ ಜೈಲಿನಲ್ಲಿರುವ ತನ್ನ ಪತಿಗೆ ಈ ಸಂಬಂಧ ಜೆಪೇ ಎಂಬ ಕಂಪ್ಯೂಟರ್ ಅಪ್ಲಿಕೇಶನ್ ಮೂಲಕ ವಿಡಿಯೊ ಕಳುಹಿಸಿದ್ದಾಳೆ ಎನ್ನಲಾಗಿದ್ದು, ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಇತರರ ವಿರುದ್ಧ ಸಿಟ್ಟಿನಿಂದ ಮಾತನಾಡುತ್ತಿರುವ ದೃಶ್ಯ ದಾಖಲಾಗಿದೆ. ಇದೇ ವಿಡಿಯೊದಲ್ಲಿ ಮಹಿಳೆ, ಕಮಲಾ ಹ್ಯಾರಿಸ್ ಅವರನ್ನು ಹತ್ಯೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News