ಕೊರೋನ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ: ಆರೋಗ್ಯ ಇಲಾಖೆಗೆ ಸವಾಲಾದ ಮಂಗಳೂರು

Update: 2021-04-18 14:34 GMT

ಮಂಗಳೂರು,ಎ.18: ದ.ಕ.ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮಂಗಳೂರು ನಗರದಲ್ಲಿ ಕಾಣಿಸಿಕೊಳ್ಳುವ ಪ್ರಕರಣಗಳು ಆರೋಗ್ಯ ಇಲಾಖೆಗೆ ಸಮಸ್ಯೆ ಮಾತ್ರವಲ್ಲ, ಸವಾಲಾಗಿಯೂ ಪರಿಣಮಿಸಿದೆ.

ಕಳೆದೊಂದು ತಿಂಗಳಲ್ಲಿ ಬೆರಳೆಣಿಕೆಯಷ್ಟಿದ್ದ ಪಾಸಿಟಿವ್ ಪ್ರಕರಗಣಗಳು ಇದೀಗ 100,200,300ರ ಗಡಿ ದಾಟುತ್ತಿವೆ. ನಗರದ ಬಂದರು, ಬಿಜೈ, ಸುರತ್ಕಲ್ ಮತ್ತಿತರ ಕಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜಿಲ್ಲೆಯ ಪಾಸಿಟಿವ್ ಶೇಖಡಾವಾರು ಗಮನಿಸಿದರೆ ಮಂಗಳೂರು ನಗರದ ಶೇಖಡಾವಾರು ಪ್ರಮಾಣ ಏರುಗತಿಯಲ್ಲಿ ಸಾಗುತ್ತಿರುವುದು ಗಮನಾರ್ಹ. ಜಿಲ್ಲೆಯಲ್ಲಿ ಒಟ್ಟು 10 ಕಂಟೈನ್‌ಮೆಂಟ್ ವಲಯವಿದೆ. ಆ ಪೈಕಿ ಮಂಗಳೂರಿನಲ್ಲಿ 8 ಮತ್ತು ಬೆಳ್ತಂಗಡಿಯಲ್ಲಿ 2 ಕಂಟೈನ್‌ಮೆಂಟ್ ವಲಯಗಳು ಇವೆ. ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಮಂಗಳೂರು ನಗರದಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚಾಗಲು ಹೊರರಾಜ್ಯದ ವಿದ್ಯಾರ್ಥಿಗಳು ಮತ್ತವರು ತಂಗಿದ್ದ ಹಾಸ್ಟೆಲ್‌ಗಳು ಸೇರಿದಂತೆ ಅಪಾರ್ಟ್‌ಮೆಂಟ್, ವಲಸೆ ಕಾರ್ಮಿಕರು, ಹೆಚ್ಚಿನ ಜನಸಂದಣಿಗಳು, ಉತ್ಸವಗಳು ಕಾರಣವಾಗಿದೆ.

ಬಂದರು ಹಾಗೂ ಸುರತ್ಕಲ್ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ ಚಾಲಕರ ಸಹಿತ ವಲಸೆ ಕಾರ್ಮಿಕರ ಆಗಮಿಸುತ್ತಾರೆ. ಕೋವಿಡ್ ಪ್ರಕರಣಗಳು ಅಧಿಕವಿರುವ ಬೆಂಗಳೂರು, ಮುಂಬೈ ಕಡೆಯಿಂದ ಮಂಗಳೂರಿಗೆ ಬಂದ ವಲಸೆ ಕಾರ್ಮಿಕರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ತೀವ್ರಗೊಳಿಸಲಾಗುತ್ತಿದೆ. ಅದರೊಂದಿಗೆ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬಂದಿವೆ. ಹಾಗಾಗಿ ನಗರ ಸಹಿತ ಜಿಲ್ಲೆಯ ಜನರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಕಿಶೋರ್ ಕುಮಾರ್ ಹೇಳುತ್ತಾರೆ.

ಮಂಗಳೂರಿನಲ್ಲಿ ಕೋವಿಡ್ ಪಾಸಿಟಿವ್‌ಗಳ ಸಂಖ್ಯೆ ಶೇ.70ರಿಂದ 80ರಷ್ಟಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ತೀರಾ ಕಡಿಮೆ ಪ್ರಕರಣಗಳಿವೆ. ನಗರದಲ್ಲಿ ಕೋವಿಡ್ ಸಮಸ್ಯೆಗಳು ಏರಿಕೆಯಾಗಲು ನಾನಾ ಕಾರಣಗಳಿವೆ. ಅದರಲ್ಲೀ ಮಾಸ್ಕ್ ಧರಿಸದಿರುವುದು, ಸುರಕ್ಷಿತ ಅಂತರ ಕಾಪಾಡದಿರುವುದು ಪ್ರಕರಣ ಹೆಚ್ಚಾಗಲು ಕಾರಣ ಎಂದು ಕೋವಿಡ್ ಜಿಲ್ಲಾ ನೋಡಲ್ ಅಧಿಕಾರಿ ಡಾ. ಅಶೋಕ್ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News