ಅರಬಿ ಸಮುದ್ರದಲ್ಲಿ ಬೋಟ್ ದುರಂತ: ಇಬ್ಬರು ಮೀನುಗಾರರ ಗುರುತು ಪತ್ತೆ

Update: 2021-04-20 15:06 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.18: ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಕೇರಳ ಮೂಲದ ‘ರಬಾ’ ಹೆಸರಿನ ಬೋಟ್ ಮುಂಬೈ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆಯ ಹಡಗಿಗೆ ಎ.11ರ ತಡರಾತ್ರಿ ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದಲ್ಲಿ ಢಿಕ್ಕಿ ಹೊಡೆದ ಪರಿಣಾಮ ಎ.16ರಂದು ಪತ್ತೆಯಾದ ಮೂವರು ಮೀನುಗಾರರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಇನ್ನೊಬ್ಬ ಮೀನುಗಾರನ ಗುರುತು ಪತ್ತೆಗೆ ಪ್ರಯತ್ನ ಸಾಗುತ್ತಿದೆ.

ಪತ್ತೆಯಾದ ಮೂವರು ಮೀನುಗಾರರಲ್ಲಿ ಒಬ್ಬರದ್ದು ಪಳನಿ ವೇಲು (51) ಎಂದು ಶನಿವಾರ ಅವರ ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ಪಳನಿವೇಲು ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಗುರುತು ಪತ್ತೆಯಾಗಿತ್ತು. ಬಳಿಕ ಕುಟುಂಬದ ಸದಸ್ಯರು ಆ ಮೃತದೇಹವನ್ನು ತಮಿಳುನಾಡಿಗೆ ಸಾಗಿಸಿದ್ದರು. ರವಿವಾರ ಪಶ್ಚಿಮ ಬಂಗಾಳದ ಮೀನುಗಾರ ಸುನಿಲ್ ದಾಸ್ ಅವರದ್ದೆಂದು ಅವರ ಕುಟುಂಬಸ್ಥರು ಕುತ್ತಿಗೆಯಲ್ಲಿದ್ದ ಕೆಂಪು ನೂಲಿನ ಆಧಾರದಲ್ಲಿ ಗುರುತು ಪತ್ತೆ ಮಾಡಿದ್ದಾರೆ. ಇನ್ನುಳಿದ ಒಂದು ಮೃತದೇಹದ ಪತ್ತೆಗೆ ಅವರ ಕುಟುಂಬದ ಸದಸ್ಯರು ಮಂಗಳೂರಿಗೆ ಸೋಮವಾರ ಬರುವ ನಿರೀಕ್ಷೆಯಿದೆ.

ಮೃತಪಟ್ಟ ಇಬ್ಬರು ಮೀನುಗಾರರ ತೀರ ಬಡ ಕುಟುಂಬದಿಂದ ಬಂದವರಾಗಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ಮಾಡುವ ಯೋಚನೆ ಇಟ್ಟುಕೊಂಡಿದ್ದಾರೆ ಎಂದು ಪೊಲೀಸ್ ಮೂಲವೊಂದು ತಿಳಿಸಿವೆ.

ಈಗಾಗಲೇ ಬೋಟ್‌ನಲ್ಲಿದ್ದ 14 ಮಂದಿಯ ಪೈಕಿ ಆರು ಮಂದಿಯ ಮೃತದೇಹ ಪತ್ತೆಯಾದರೆ ಉಳಿದಿಬ್ಬರು ರಕ್ಷಿಸಲ್ಪಟ್ಟಿದ್ದರು. ಇನ್ನು ಆರು ಮಂದಿಯ ಹುಡುಕಾಟವನ್ನು ಕರಾವಳಿ ಕಾವಲು ಪೊಲೀಸ್ ಪಡೆ ಸೇರಿದಂತೆ ಕೋಸ್ಟ್‌ಗಾರ್ಡ್, ಕಾರವಾರದ ನೌಕನೆಲೆಯ ಹಡಗು, ಹೆಲಿಕಾಪ್ಟರ್ ಶೋಧ ಕಾರ್ಯವನ್ನು ರವಿವಾರವೂ ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News