ವೈದ್ಯಕೀಯ ಆಮ್ಲಜನಕದ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುತ್ತಿದೆ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ

Update: 2021-04-18 15:43 GMT

ಹೊಸದಿಲ್ಲಿ,ಎ.18: ವೈದ್ಯಕೀಯ ದರ್ಜೆಯ ಆಮ್ಲಜನಕದ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ರವಿವಾರ ಇಲ್ಲಿ ತಿಳಿಸಿದರು.

ಭಾರತದಲ್ಲಿ ಹಾಲಿ ಸುಮಾರು 20 ಲಕ್ಷ ಜನರು ಕೊರೋನವೈರಸ್ ಸೋಂಕುಪೀಡಿತರಾಗಿದ್ದು,ಹಲವಾರು ರಾಜ್ಯಗಳು ಎಲ್ಲ ಕೈಗಾರಿಕಾ ಅಮ್ಲಜನಕ ಉತ್ಪಾದನೆಯನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದರೂ ದೇಶಾದ್ಯಂತ ಆಮ್ಲಜನಕದ ಕೊರತೆ ಕಾಡುತ್ತಿದೆ. ಮಹಾರಾಷ್ಟ್ರ ಮತ್ತು ದಿಲ್ಲಿಯಂತಹ ರಾಜ್ಯಗಳು ಆಮ್ಲಜನಕ ಪೂರೈಕೆಯ ಕೊರತೆಯ ಬಗ್ಗೆ ಈಗಾಗಲೇ ದೂರಿಕೊಂಡಿವೆ. ತಾನು 50,000 ಟನ್‌ಗಳಷ್ಟು ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳುವುದಾಗಿ ಸರಕಾರವು ಗುರುವಾರ ತಿಳಿಸಿತ್ತು.

ಕೇಂದ್ರವು 2020ರಲ್ಲಿ 201.58 ಕೋ.ರೂ.ಗಳ ವೆಚ್ಚದಲ್ಲಿ ಎಲ್ಲ ರಾಜ್ಯಗಳ ಆಸ್ಪತ್ರೆಗಳಲ್ಲಿ 162 ಪ್ರೆಷರ್ ಸ್ವಿಂಗ್ ಎಡ್ಸಾರ್ಪ್ಶನ್ ಪ್ಲಾಂಟ್ (ಪಿಎಸ್‌ಎಪಿ)ಗಳನ್ನು ಮಂಜೂರು ಮಾಡಿದ್ದು,ಇವು ವೈದ್ಯಕೀಯ ಆಮ್ಲಜನಕ ಸಾಮರ್ಥ್ಯವನ್ನು 154.10 ಟನ್‌ಗಳಷ್ಟು ಹೆಚ್ಚಿಸಲಿವೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

ಪಿಎಸ್‌ಎಪಿಗಳು ಆಮ್ಲಜನಕವನ್ನು ತಯಾರಿಸುತ್ತವೆ ಮತ್ತು ವೈದ್ಯಕೀಯ ಆಮ್ಲಜನಕದ ತಮ್ಮ ಅಗತ್ಯಕ್ಕಾಗಿ ಸ್ವಾವಲಂಬಿಯಾಗಲು ಆಸ್ಪತ್ರೆಗಳಿಗೆ ನೆರವಾಗುತ್ತವೆ.

ಈ ಪೈಕಿ 33 ಪಿಎಸ್‌ಎಪಿಗಳನ್ನು ಮಧ್ಯಪ್ರದೇಶ (5),ಹಿಮಾಚಲ ಪ್ರದೇಶ (4),ಚಂಡಿಗಡ,ಗುಜರಾತ ಮತ್ತು ಉತ್ತರಾಖಂಡ (ತಲಾ 3),ಬಿಹಾರ,ಕರ್ನಾಟಕ ಮತ್ತು ತೆಲಂಗಾಣ (ತಲಾ 2) ಹಾಗೂ ಆಂಧ್ರಪ್ರದೇಶ, ದಿಲ್ಲಿ, ಹರ್ಯಾಣ, ಕೇರಳ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್ ಮತ್ತು ಉತ್ತರ ಪ್ರದೇಶ (ತಲಾ 1)ಗಳಲ್ಲಿ ಸ್ಥಾಪಿಸಲಾಗಿದೆ. ಮೇ ಅಂತ್ಯದೊಳಗೆ ಉಳಿದ ಪಿಎಸ್‌ಎಪಿಗಳನ್ನು ಸ್ಥಾಪಿಸಲಾಗುವುದು. ಇವುಗಳ ವೆಚ್ಚವನ್ನು ಕೇಂದ್ರವೇ ಸಂಪೂರ್ಣವಾಗಿ ಭರಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.

100ಕ್ಕೂ ಅಧಿಕ ಪಿಎಸ್‌ಎಪಿಗಳ ಸ್ಥಾಪನೆಗೆ ರಾಜ್ಯಗಳು ಕೋರಿದ್ದು,ಇವುಗಳನ್ನೂ ಮಂಜೂರು ಮಾಡಲಾಗುತ್ತದೆ ಎಂದು ಅದು ತಿಳಿಸಿದೆ.

ತನ್ಮಧ್ಯೆ,ರವಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,61,500 ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾಗಿದ್ದು,ಇದು ಸಾರ್ವಕಾಲಿಕ ದೈನಂದಿನ ದಾಖಲೆಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,47,88,109ಕ್ಕೇರಿದೆ. ಈ ಅವಧಿಯಲ್ಲಿ 1,501 ಸಾವುಗಳು ದಾಖಲಾಗಿದ್ದು,ಒಟ್ಟು ಸಾವುಗಳ ಸಂಖ್ಯೆ 1,77,150ಕ್ಕೆ ತಲುಪಿದೆ. ದೇಶದಲ್ಲಿ ಸತತ ನಾಲ್ಕನೇ ದಿನ ಎರಡು ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News