ಪಾಕ್: ಟಿಎಲ್‌ಪಿ ಕಾರ್ಯಕರ್ತರಿಂದ 6 ಮಂದಿ ಭದ್ರತಾ ಸಿಬ್ಬಂದಿಯ ಒತ್ತೆಸೆರೆ

Update: 2021-04-18 17:36 GMT

ಇಸ್ಲಾಮಾಬಾದ್,ಎ.18: ಪಾಕಿಸ್ತಾನದ ತೀವ್ರವಾದಿ ಗುಂಪು ತೆಹ್ರಿಕಿ ಲಬೈಕ್ ಪಾಕಿಸ್ತಾನ (ಟಿಎಲ್‌ಪಿ)ಯ ಕಾರ್ಯಕರ್ತರು ಲಾಹೋರ್‌ನಲ್ಲಿರುವ ತಮ್ಮ ಸಂಘಟನೆಯ ಮುಖ್ಯಕಚೇರಿಯಲ್ಲಿ ಆರು ಮಂದಿ ಭದ್ರತಾ ಸಿಬ್ಬಂದಿಯನ್ನು ಒತ್ತೆಸೆರೆಯಲ್ಲಿರಿಸಿದ್ದಾರೆ.

ಟಿಎಲ್‌ಪಿ ಕಾರ್ಯಕರ್ತರು ಒತ್ತೆಸೆರೆಯಲ್ಲಿರಿಸಿರುವ ಭದ್ರತಾಸಿಬ್ಬಂದಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಅರೆಸೈನಿಕ ಪಡೆಯ ಸಿಬ್ಬಂದಿಯೆಂದು ಅಧಿಕೃತ ಮೂಲಗಳು ತಿಳಿಸಿವೆ.

ತಮ್ಮ ನಾಯಕನ ಬಂಧನವನ್ನು ಪ್ರತಿಭಟಿಸಿ ಟಿಎಲ್‌ಪಿ ಕಾರ್ಯಕರ್ತರು ಕಳೆದ ಒಂದು ವಾರದಿಂದ ಪಾಕ್‌ನ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಪ್ರವಾದಿಯವರ ಕುರಿತ ಅವಹೇಳನಕಾರಿ ವ್ಯಂಗ್ಯಚಿತ್ರಗಳನ್ನು ಫ್ರಾನ್ಸ್‌ನ ನಿಯತಕಾಲಿಕವೊಂದು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಫ್ರೆಂಚ್ ರಾಯಭಾರಿಯವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಟಿಎಲ್‌ಪಿಯು ಪಾಕ್ ಸರಕಾರಕ್ಕೆ ಎಪ್ರಿಲ್ 20ರ ಅಂತಿಮ ಗಡುವನ್ನು ನೀಡಿದೆ.

  ಆ ಬಳಿಕ ಪಾಕ್ ಪೊಲೀಸರು ಟಿಎಲ್‌ಪಿಯ ವರಿಷ್ಠ ಸಾದ್ ರಿಝ್ವಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದನ್ನು ಪ್ರತಿಭಟಿಸಿ ಸಾವಿರಾರು ಟಿಎಲ್‌ಪಿ ಬೆಂಬಲಿಗರು ಪಾಕ್‌ನ ವಿವಿಧೆಡೆ ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸುತ್ತಿದ್ದಾರೆ.

  ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ. ಹಿಂಸಾಚಾರ ಭುಗಿಲೆದ್ದ ಬೆನ್ನಲ್ಲೇ ಪಾಕ್ ಸರಕಾರ ಟಿಎಲ್‌ಪಿಗೆ ನಿಷೇಧ ಹೇರಿದೆ.

    ಲಾಹೋರ್‌ನಲ್ಲಿ ಟಿಎಲ್‌ಪಿ ಕಾರ್ಯಕರ್ತರು ಸಾವಿರಾರು ಲೀಟರ್ ಪೆಟ್ರೋಲ್ ತುಂಬಿರುವ ಎರಡು  ಟ್ಯಾಂಕರ್‌ಗಳನ್ನು ವಶದಲ್ಲಿಟ್ಟುಕೊಂಡಿದ್ದಾರೆ. ಅವರು ಪೆಟ್ರೋಲ್ ಬಾಂಬ್‌ಗಳು ಹಾಗೂ ಕಲ್ಲುಗಳನ್ನು ಭದ್ರತಾ ಅಧಿಕಾರಿಗಳ ಮೇಲೆ ಎಸೆಯುತ್ತಿದ್ದಾರೆ. ಕಾರ್ಯಕರ್ತರು ಗುಂಡಿನ ದಾಳಿಗಳನ್ನು ಕೂಡಾ ನಡೆಸುತ್ತಿದ್ದು, 11 ಭದ್ರತಾ ಅಧಿಕಾರಿಗಳಿಗೆ ಗಾಯಗಳಾಗಿವೆ ಎಂದು ಲಾಹೋರ್ ಪೊಲೀಸ್ ವಕ್ತಾರ ಅರೀಫ್ ರಾನಾ ಅವರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News