ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯಿಂದ ಸ್ಥಾಪನಾ ದಿನಾಚರಣೆ

Update: 2021-04-18 18:21 GMT

ಮಂಗಳೂರು, ಎ.18:  ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ತನ್ನ ಪಕ್ಷದ ಸ್ಥಾಪನೆಯ ದಶವಾರ್ಷಿಕ ದಿನಾಚರಣೆಯನ್ನು ಪಕ್ಷದ ಜಿಲ್ಲಾ ಕಚೇರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯಿರುವ ವೆಲ್ಪೇರ್ ಭವನದಲ್ಲಿ ಸರಳವಾಗಿ ನೆರವೇರಿತು.

ಈ ನಿಟ್ಟಿನಲ್ಲಿ ಎಪ್ರಿಲ್  ಹದಿನೆಂಟರಂದು ವೆಲ್ಪೇರ್ ಭವನದಲ್ಲಿ  ಪಕ್ಷದ ಹಿತೈಷಿಗಳು, ಸದಸ್ಯರು ಮತ್ತು ಪದಾಧಿಕಾರಿಗಳು ಕ್ಲಪ್ತ ಸಮಯ ಪೂರ್ವಾಹ್ನ 10 ಕ್ಕೆ  ಸಭೆ ಸೇರಿ, ಡಬ್ಲ್ಯು.ಪಿ. ಐ. ದ.ಕ.ಜಿಲ್ಲಾಧ್ಯಕ್ಷರಿಂದ ಪಕ್ಷದ ಧ್ವಜಾರೋಹಣ ಮಾಡಲಾಯಿತು. ನಂತರ ನಡೆದ ಸಮಾಲೋಚನಾ ಸಭೆಯಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಸರಪ್ ರಾಜ್ ರವರು, ಕಳೆದ ಹತ್ತು ವರ್ಷಗಳ ಹಿಂದೆ ದೇಶದಲ್ಲಿನ ರಾಜಕೀಯ ಅರಾಜಕತೆಯನ್ನು ಗಮನಿಸಿ ಭ್ರಷ್ಟಾಚಾರರಹಿತ ರಾಜಕೀಯ ಅಗತ್ಯತೆಯನ್ನು ಮನಗಂಡು ಆರಂಭಿಸಿದ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ರಾಜಕೀಯ ಕ್ಷೇತ್ರವಿಂದು ಕಲುಷಿತಗೊಂಡು ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು  ಬಿಕರಿ  ವಸ್ತುಗಳಾಗಿ  ಮಾರಲ್ಪಡುತ್ತಿದ್ದು, ಪ್ರಜಾತಂತ್ರ ವ್ಯವಸ್ಥೆಯೇ ಅತಂತ್ರಕ್ಕೆ ತಲುಪಿದ ಅಪಾಯಕಾರಿ ಸಂಧರ್ಭದಲ್ಲಿ ಕೂಡಾ ಮೌಲ್ಯಧಾರಿತ ರಾಜಕೀಯವನ್ನು ಪ್ರತಿಪಾದಿಸುತ್ತಾ ಮುನ್ನಡೆಯುತ್ತಿದೆ ಎಂದು ಹೇಳಿದರು.

ನಂತರ ಸದಸ್ಯರ ಅನಿಸಿಕೆ ಮತ್ತು ಮುಕ್ತ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಎಫ್. ಐ. ಟಿ. ಯು. ರಾಜ್ಯ ಕಾರ್ಯದರ್ಶಿ ದಿವಾಕರ್ ಬೋಳೂರುರವರು ರಾಜಕೀಯ ಬ್ಲ್ಯಾಕ್ ಮೇಲ್ ಗಳು ತುಂಬಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ವೆಲ್ಪೇರ್ ಪಕ್ಷವು ಎಲ್ಲಾ ವಿಧ ಆತಂಕ ಅಮಿಷಗಳನ್ನು ಮೆಟ್ಟಿನಿಂತು ಜನರ ಸಮಸ್ಯೆಗಳಿಗೆ ನೇರ ಸ್ಪಂದಿಸುವ ಪಕ್ಷವಾಗಿದೆಯೆಂದರು.

ಪಕ್ಷದ ಜಿಲ್ಲಾ ಸಮಿತಿಯ ಮಾದ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆಯವರು ಮಾತನಾಡಿ ರಾಜಕೀಯವು ಇಂದು ಸೈದ್ದಾಂತಿಕತೆಯನ್ನು ಕಳೆದುಕೊಂಡಿರುವ ಪ್ರಸಕ್ತ ಸನ್ನಿವೇಶದಲ್ಲಿಯೂ ವೆಲ್ಪೇರ್ ಪಕ್ಷವು ಸಾಮಾಜಿಕ ನ್ಯಾಯ ಮತ್ತು ಜನಸಂಖ್ಯಾನುಪಾತ ಪ್ರಾತಿನಿಧ್ಯವನ್ನು ಎತ್ತಿಹಿಡಿಯುವ ಮೂಲಕ ಸರ್ವರಿಗೂ ಅವರವರ ನ್ಯಾಯದ ಬೇಡಿಕೆಯ ಹಕ್ಕಿನ ಅವಕಾಶ ನೀಡಲು ಒತ್ತು ನೀಡುತ್ತದೆಯೆಂದರು. ಪಕ್ಷದ ಜಿಲ್ಲಾ ಕೋಶಾಧಿಕಾರಿ ಮನ್ಸೂರ್ ಸಿ. ಎಚ್. ಸಮಾಜದ ಎಲ್ಲಾ ಸಮಸ್ಯೆಗಳನ್ನು ತನ್ನ ಸಮಸ್ಯೆಯೆಂದು ಕಾಣುವ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಯಾವುದೇ ಮತೀಯ ವಿಭಜನೆವಾದಿಗಳ ನಿಲುವುಗಳಿಂದ ಮುಕ್ತ ವಾಗಿಸಿದೆಯೆಂದು ಹೇಳಿದರು. ಸಮಾರೋಪ ಭಾಷಣ ಮಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷರಾದ  ಶ್ರೀಕಾಂತ್ ಸಾಲ್ಯಾನ್ ರವರು ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳು ಹೇಗಿರಬೇಕು ಎಂಬುವುದರ ಬಗ್ಗೆ ದೀರ್ಘವಾದ ಸೂಚ್ಯ ಮಾಹಿತಿಗಳನ್ನು ನೀಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ರವರು ಸ್ವಾಗತಿಸಿ, ನಿರೂಪಿಸಿದರು.

ಸಭೆಯ ಮುಗಿದ ತಕ್ಷಣ ಪಕ್ಷದ ಕಾರ್ಯಕರ್ತರ ನಿಯೋಗವು, ಮಂಗಳೂರು ಕೊಟ್ಟಾರದಲ್ಲಿರುವ ಶ್ರೀಮತಿ ತಬಸ್ಸುಮ್ ರವರ ಸ್ನೇಹದೀಪ ಸುಶ್ರೂಶ ಕೇಂದ್ರಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಹಣ್ಣುಹಂಪಲುಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News