ಹಡಿಲು ಬಿಟ್ಟ ಕೃಷಿಭೂಮಿ ಸರಕಾರದ ಸುಪರ್ದಿಗೆ: ಉಡುಪಿ ಡಿಸಿ

Update: 2021-04-19 11:48 GMT

ಉಡುಪಿ, ಎ.19: ಹಡಿಲು ಬಿಟ್ಟ ಕೃಷಿ ಭೂಮಿಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದು, ಜಿಲ್ಲೆಯಲ್ಲಿರುವ ಅಂತಹ ಭೂಮಿಯನ್ನು ಗುರುತಿಸಿ, ಅದರ ಮಾಲಕರಿಗೆ ನೋಟೀಸ್ ಜಾರಿ ಮಾಡಲಾಗುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಆಂದೋಲನದ ಪ್ರಥಮ ಹಂತವಾಗಿ ಕೃಷಿ ಚಟುವಟಿಕೆ ನಡೆಸುವ ಗದ್ದೆಗಳಿಗೆ ಸಮರ್ಪಕವಾಗಿ ನೀರು ಹರಿದು ಹೋಗಲು ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಸೋಮವಾರ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಬಳಿ ಚಾಲನೆ ನೀಡಿ ಅವರು ಮಾತನಾಡುತಿದ್ದರು. ಉಡುಪಿ ಜಿಲ್ಲೆಯಲ್ಲಿ ಹಡಿಲು ಬಿಟ್ಟ ಭೂಮಿಯನ್ನು ಸರಕಾರದ ಸುಪರ್ಧಿಗೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಳೆದ ಬಾರಿ ನೋಟೀಸ್ ಜಾರಿ ಮಾಡಲು ನಿರ್ಧರಿಸ ಲಾಗಿತ್ತು. ಆದರೆ ಕೊರೋನಾದಿಂದಾಗಿ ಮತ್ತು ಕೃಷಿ ಕೆಲಸಕ್ಕೆ ಜನ ಸಿಗದಿರುವು ದರಿಂದ ಕೃಷಿ ಚಟುವಟಿಕೆ ನಡೆಯದ ಕಾರಣ ಸಂಬಂಧಪಟ್ಟವರಿಗೆ ನೋಟೀಸ್ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಖಂಡಿತವಾಗಿಯೂ ನೋಟೀಸ್ ಜಾರಿ ಮಾಡಲಾಗುವುದು ಎಂದರು.

ಹಡಿಲು ಬಿಟ್ಟ ಭೂಮಿ ಮತ್ತು ಅದರ ಮಾಲಕರನ್ನು ಗುರುತಿಸುವಂತೆ ಮತ್ತು ಅವರಿಗೆ ನೋಟೀಸ್ ಜಾರಿ ಮಾಡುವಂತೆ ಆಯಾ ತಾಲೂಕಿನ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ನೋಟೀಸ್ ನೀಡಿದ ಬಳಿಕವೂ ಅವರು ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡದಿದ್ದರೆ ಅಂತಹ ಭೂಮಿಗಳನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲಾಗುವುದು. ಆದುದರಿಂದ ಸಂಬಂಧಪಟ್ಟವರು ತಕ್ಷಣ ಹಡಿಲು ಬಿಟ್ಟ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಹಡಿಲು ಮುಕ್ತ ಉಡುಪಿ:

ಆಧುನಿಕ ತಂತ್ರಜ್ಞಾನ ಮತ್ತು ಯಂತ್ರೋ ಪಕರಣಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳನ್ನು ಮಾಡಿದರೆ ಲಾಭದಾಯಕವನ್ನಾಗಿಸಲು ಸಾಧ್ಯವಿದೆ. ಉಡುಪಿ ವಿಧಾನಸಭಾ ಕ್ಷೇತ್ರದಂತೆ ಜಿಲ್ಲೆಯ ಇತರ ಕ್ಷೇತ್ರದಲ್ಲೂ ಈ ರೀತಿಯ ಅಭಿಯಾನ ನಡೆದರೆ ಉಡುಪಿ ಹಡಿಲು ಮುಕ್ತ ಜಿಲ್ಲೆ ಮತ್ತು ಸಮೃದ್ಧ ಉಡುಪಿ ನಿರ್ಮಾಣ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ಪಟ್ಟರು. ಹಡಿಲು ಬಿಟ್ಟ ಭೂಮಿಯಲ್ಲಿ ನೀರು ಇಂಗುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗುತ್ತದೆ. ಆದುದರಿಂದ ಜಿಪಂ ವತಿಯಿಂದ ಜಲ ಶಕ್ತಿ ಅಭಿಯಾನವನ್ನು ಪ್ರತಿಯೊಂದು ಗ್ರಾಪಂನಲ್ಲಿ ಮಾಡಲು ಉದ್ದೇಶಿಸಲಾಗಿದೆ. ಆ ಮೂಲಕ ಕೆರೆಗಳನ್ನು ಹೂಳೆತ್ತುವ, ನೀರನ್ನು ತಡೆ ಹಿಡಿಯುವ ಕಾರ್ಯಕ್ರಮಗಳನ್ನು ಮಾಡಲಾಗುವುದು. ಅದರ ಜೊತೆಗೆ ಕೃಷಿ ಚಟುವಟಿಕೆಯೊಂದಿಗೆ ನೀರು ಇಂಗಿಸುವ ಕೆಲಸ ಮಾಡಲಾಗುವುದು ಎಂದರು. ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಹಡಿಲು ಭೂಮಿ ಕೃಷಿ ಆಂದೋಲನದ ಹಿನ್ನೆಲೆಯಲ್ಲಿ ನಗರಸಭೆಯ 35 ವಾರ್ಡ್‌ಗಳು ಹಾಗೂ 19 ಗ್ರಾಪಂ ಸೇರಿದಂತೆ ಒಟ್ಟು 54 ಪ್ರದೇಶದಲ್ಲಿ ಹಿಟಾಚಿಗಳ ಮೂಲಕ ಕಾಲುವೆಗಳ ಹೊಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2,000 ಎಕರೆ ಪ್ರದೇಶದಲ್ಲಿ ಕೃಷಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೇಷಕೃಷ್ಣ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯ ಮಂಜುನಾಥ್ ಮಣಿಪಾಲ್, ನಿಟ್ಟೂರು ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News