"ನನಗೆ ಕೊರೋನವೈರಸ್ ದೊರಕಿದ್ದರೆ ಫಡ್ನವೀಸ್ ಬಾಯಿಗೆ ಹಾಕುತ್ತಿದ್ದೆ" ಎಂದ ಶಿವಸೇನೆ ಶಾಸಕ

Update: 2021-04-19 11:59 GMT

ಮುಂಬೈ: "ನನಗೆ ಕೊರೋನ ವೈರಸ್ ದೊರಕಿದ್ದರೆ ನಾನು ಅದನ್ನು ದೇವೇಂದ್ರ ಫಡ್ನವೀಸ್ ಅವರ ಬಾಯಿಗೆ ಹಾಕುತ್ತಿದ್ದೆ" ಎಂದು ಹೇಳುವ ಮೂಲಕ  ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್  ವಿವಾದದ ಧೂಳೆಬ್ಬಿಸಿದ್ದಾರೆ.

ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ರೆಮ್ಡೆಸೆವಿರ್ ಔಷಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಫಾರ್ಮಾ ಕಂಪೆನಿಯೊಂದರ ಉನ್ನತ ಅಧಿಕಾರಿಯೊಬ್ಬರನ್ನು ಮುಂಬೈ ಪೊಲೀಸರು  ವಿಚಾರಣೆ ನಡೆಸಿದ್ದಕ್ಕೆ  ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಆಕ್ಷೇಪ ಸೂಚಿಸಿದಂದಿನಿಂದ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಫಡ್ನವೀಸ್ ಅವರು ಇಂತಹ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದಿದ್ದರೆ ಏನು ಮಾಡುತ್ತಿದ್ದರು ಎಂದೂ ಗಾಯಕ್ವಾಡ್ ಪ್ರಶ್ನಿಸಿದ್ದಾರೆ.

"ರಾಜ್ಯ ಸಚಿವರುಗಳನ್ನು ಬೆಂಬಲಿಸುವ ಬದಲು ಬಿಜೆಪಿ ನಾಯಕರು ಅವರನ್ನು  ಅಣಕಿಸುತ್ತಿದ್ದಾರೆ ಹಾಗೂ ಈ ಸರಕಾರ ಹೇಗೆ ವಿಫಲವಾಗಲಿದೆ ಎಂದು ಕಾಯುತ್ತಿದ್ದಾರೆ" ಎಂದು ಹೇಳಿದರು.

ಪ್ರಸಕ್ತ ಸಾಂಕ್ರಾಮಿಕ ಹಾಗೂ ರೆಮ್ಡೆಸಿವಿರ್ ಚುಚ್ಚುಮದ್ದುಗಳ ಕುರಿತಂತೆ  ಫಡ್ನವೀಸ್ ಸಹಿತ ಬಿಜೆಪಿ ನಾಯಕರುಗಳಾದ ಪ್ರವೀಣ್ ದರೇಕರ್ ಹಾಗೂ ಚಂದ್ರಕಾಂತ್ ಪಾಟೀಲ್  ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.

"ರಾಜ್ಯಕ್ಕೆ  ಔಷಧಿ ಪೂರೈಸದಂತೆ ಕೇಂದ್ರ ಸರಕಾರ ಮಹಾರಾಷ್ಟ್ರದಲ್ಲಿರುವ ರೆಮ್ಡೆಸಿವಿರ್ ಔಷಧಿ ತಯಾರಿಕಾ ಕಂಪೆನಿಗಳಿಗೆ ಸೂಚಿಸಿದೆ. ಅವರು ಅಗತ್ಯ ಆಕ್ಸಿಜನ್ ಅನ್ನು ಕೂಡ ಮಹಾರಾಷ್ಟ್ರಕ್ಕೆ ಪೂರೈಸುತ್ತಿಲ್ಲ" ಎಂದು ಗಾಯಕ್ವಾಡ್ ಆರೋಪಿಸಿದರು.

"ಮಹಾರಾಷ್ಟ್ರದಲ್ಲಿ ಜನರು ಸಾಯುತ್ತಿರುವಾಗ ಅವರು ಇಲ್ಲಿನ  ಬಿಜೆಪಿ ಕಚೇರಿಯೊಂದರ ಮುಖಾಂತರ ಗುಜರಾತ್‍ಗೆ  ರೆಮ್ಡೆಸೆವಿರ್ ಔಷಧಿಯ 50,000 ವಯಲ್‍ಗಳನ್ನು ಉಚಿತವಾಗಿ  ಪೂರೈಸುತ್ತಿದ್ದಾರೆ. ಫಡ್ನವೀಸ್ ಹಾಗೂ ಕೇಂದ್ರ ಸರಕಾರದಿಂದ ಇಂತಹ ಕೀಳು ಮಟ್ಟದ ರಾಜಕೀಯ ನಡೆಯುತ್ತಿದೆ, ಅವರ ಕೃತ್ಯಗಳ ಬಗ್ಗೆ ಅವರಿಗೆ ನಾಚಿಕೆಯಾಗಬೇಕು" ಎಂದು ಅವರು ಹೇಳಿದರು.

ಫಡ್ನವೀಸ್ ವಿರುದ್ಧ ಪ್ರಿಯಾಂಕ ಕಿಡಿ: 

ಇನ್ನೊಂದೆಡೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರೂ ದೇವೇಂದ್ರ ಫಡ್ನವೀಸ್ ವಿರುದ್ಧ ಕಿಡಿ ಕಾರಿದ್ದಾರೆ. "ಫಡ್ನವೀಸ್ ಅವರು ರೆಮ್ಡೆಸಿವಿರ್ ಇಂಜೆಕ್ಷನ್‍ಗಳನ್ನು ಅಕ್ರಮವಾಗಿ ದಾಸ್ತಾನಿರಿಸಿ ಮನುಕುಲದ ವಿರುದ್ಧ ಅಪರಾಧವೆಸಗಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.

"ರೆಮ್ಡೆಸಿವಿರ್ ಇಂಜೆಕ್ಷನ್‍ಗಾಗಿ ದೇಶದ ವಿವಿಧೆಡೆಗಳ ಜನರು ಅಲೆಯುತ್ತಿದ್ದಾಗ ಈ ಬಿಜೆಪಿ ನಾಯಕ  ಔಷಧಿಯ ಅಕ್ರಮ ದಾಸ್ತಾನಿರಿಸಿ ಮನುಕುಲದ ವಿರುದ್ಧ ಅಪರಾಧವೆಸಗಿದ್ದಾರೆ" ಎಂದು ಟ್ವೀಟ್ ಮಾಡಿರುವ ಪ್ರಿಯಾಂಕ, ಜತೆಗೆ ಫಡ್ನವೀಸ್ ಅವರು ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿರುವ ವೀಡಿಯೋ ಕೂಡ ಶೇರ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News