ಉಡುಪಿ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿಗಳ ಪುನರ್‌ಮಿಲನ

Update: 2021-04-19 13:01 GMT

ಉಡುಪಿ, ಎ.19: 1975ರಿಂದ 1982ರವರೆಗೆ ಉಡುಪಿಯಲ್ಲಿದ್ದ ಉಡುಪಿ ಕಾನೂನು ಕಾಲೇಜಿನ (ಈಗಿನ ವೈಕುಂಠ ಬಾಳಿಗಾ ಕಾನೂನು ಕಾಲೇಜು) ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ ರವಿವಾರ ಕುಂಜಿಬೆಟ್ಟಿನಲ್ಲಿರುವ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಜರಗಿತು.

ಇದರಲ್ಲಿ ಕೇರಳ, ಆಂಧ್ರ ಪ್ರದೇಶ, ಕರ್ನಾಟಕದ ವಿವಿದೆಡೆ, ತಮಿಳುನಾಡಿನ ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು. ಸಾಕಷ್ಟು ಮಂದಿ ಆನ್‌ಲೈನ್ ಮೂಲಕವೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇವರಲ್ಲಿ ಬಹಳಷ್ಟು ಮಂದಿ ನ್ಯಾಯಾಧೀಶರು, ಜನಪ್ರಿಯ ವಕೀಲರಾಗಿ ಉಡುಪಿಗೆ ಕೀರ್ತಿ ತಂದವರೂ ಇದ್ದರು. ಮುಖ್ಯ ಅತಿಥಿಯಾಗಿದ್ದ ಉಡುಪಿಯ ಖ್ಯಾತ ಹಿರಿಯ ಲೆಕ್ಕ ಪರಿಶೋಧಕರೂ ಕಾಲೇಜಿನ ವಿಶ್ವಸ್ತ ಮಂಡಳಿಯ ಸದಸ್ಯರೂ ಆದ ಎಂ.ಎನ್.ಕಾಮತ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ ಅಧ್ಯಕ್ಷತೆ ವಹಿಸಿದ್ದರು. ಅಲೆವೂರು ಮಾಧವ ಆಚಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಅಗಲಿದ ಸಂಸ್ಥೆಯ ಉಪನ್ಯಾಸಕರಿಗೆ ಹಾಗೂ ಹಳೇ ವಿದ್ಯಾರ್ಥಿಗಳಿಗೆ ಮೌನ ಪ್ರಾರ್ಥನೆ ಮೂಲಕ ಸಂತಾಪ ಸೂಚಿಸಲಾಯಿತು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಪರವಾಗಿ ಎಂ.ಎನ್.ಕಾಮತ್ ಹಾಗೂ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಮಾತನಾಡಿ, ಸಂಸ್ಥೆ ಅತಿ ಹಳೇ ವಿದ್ಯಾರ್ಥಿಗಳೆಲ್ಲಾ ಮತ್ತೆ ಒಟ್ಟು ಸೇರಿ ಪುನರ್ ಮಿಲನ್ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಂತೋಷ ತಂದಿದೆ. ಹಳೇ ವಿದ್ಯಾರ್ಥಿಗಳೇ ಸಂಸ್ಥೆಯ ಬೆನ್ನೆಲುಬು ಮತ್ತು ರಾಯಭಾರಿಗಳು ಎಂದರು.

 ವೇದಿಕೆಯಲ್ಲಿ ಅಲೆವೂರು ಮಾಧವ ಆಚಾರ್, ಸಾಜನ್ ಮನ್ನಾಲಿ ಉಪಸ್ಥಿತರಿದ್ದರು. ಸರಸನ್ ಹಾಗೂ ಸಾಜನ್ ಮನ್ನಾಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. 1981ನೇ ಸಾಲಿನ ವಿದ್ಯಾರ್ಥಿ ನಾಯಕ ಎಂ.ನಂದಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಿ.ಜಿ.ಮೀನಾಕ್ಷಿ ವಂದಿಸಿದರು. ಬಳಿಕ ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News