"ಸೋಲಿನ ಸುಳಿವು ದೊರಕಿದ್ದರಿಂದ ಕೋವಿಡ್ ನೆಪದಲ್ಲಿ ಪಶ್ಚಿಮ ಬಂಗಾಳ ಪ್ರಚಾರದಿಂದ ದೂರವುಳಿದ ರಾಹುಲ್ ಗಾಂಧಿ"

Update: 2021-04-19 14:26 GMT

ಕೊಲ್ಕತ್ತಾ: ಏರುತ್ತಿರುವ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಪಶ್ಚಿಮ ಬಂಗಾಳದಲ್ಲಿ ತಮ್ಮ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ  ಕಾನೂನು ಮತ್ತು ಐಟಿ  ಸಚಿವ ರವಿ ಶಂಕರ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.  ಸೋಲಿನ  ಸುಳಿವು ಅವರಿಗೆ ದೊರಕಿರುವುದರಿಂದ ಅವರು ಕೋವಿಡ್ ನೆಪದಲ್ಲಿ ಬಂಗಾಳ ಪ್ರಚಾರದಿಂದ ದೂರವುಳಿಯಲು ನಿರ್ಧರಿಸಿದ್ದಾರೆ ಎಂದು  ಪ್ರಸಾದ್ ಹೇಳಿದ್ದಾರೆ.

"ಕ್ಯಾಪ್ಟನ್‍ಗೆ ತಮ್ಮ ಹಡಗು ಮುಳುಗುತ್ತಿದೆ ಎಂದು ಕಂಡು ಬಂದಿರುವುದರಿಂದ ಇದೊಂದು ನೆಪ" ಎಂದು  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರವಿ ಶಂಕರ್ ಪ್ರಸಾದ್ ಹೇಳಿದರು.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರದ ವಿರುದ್ಧವೂ ಕಿಡಿಕಾರಿದ ರವಿ ಶಂಕರ್ ಪ್ರಸಾದ್,  ಸರಕಾರವು "ದುರಾಡಳಿತ, ಭ್ರಷ್ಟಾಚಾರ ಮತ್ತು (ಮುಸ್ಲಿಂ) ಓಲೈಕೆಯ  ಪ್ರತಿರೂಪವಾಗಿದೆ" ಎಂದರು.

"ಟಿಎಂಸಿಯು ಕೋವಿಡ್ ನಿರ್ವಹಣೆ ಕುರಿತು ಬಹಳಷ್ಟು ಹೇಳುತ್ತಿದೆ. ಕೋವಿಡ್ ಕುರಿತಂತೆ ಪ್ರಧಾನಿ ಎಲ್ಲಾ ರಾಜ್ಯಗಳ ಸಿಎಂ ಜತೆ ನಡೆಸಿದ ಸಭೆಯಲ್ಲಿ ಮಮತಾ ಜಿ ಭಾಗವಹಿಸಿದ್ದರೇ? ಇದಕ್ಕೆ ಉತ್ತರ ಇಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.

"ಚುನಾವಣೆಗಳು ಒಂದು ಸಂವಿಧಾನಾತ್ಮಕ  ಕರ್ತವ್ಯ ಹಾಗೂ ಇದನ್ನು ಚುನಾವಣಾ ಆಯೋಗ ನಡೆಸುತ್ತಿದೆ. ಆಯೋಗ ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ನಾವು ಪಾಲಿಸುತ್ತೇವೆ. ಬಿಹಾರದಲ್ಲೂ ಕೋವಿಡ್ ನಡುವೆ ಚುನಾವಣೆ ನಡೆದಿತ್ತು. ಚುನಾವಣಾ ಪ್ರಕ್ರಿಯೆ ಕುರಿತು ನಿರ್ಧರಿಸುವ ಏಕೈಕ ಪ್ರಾಧಿಕಾರ ಚುನಾವಣಾ ಆಯೋಗವಾಗಿದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News