ಲಾಕ್‌ಡೌನ್ ಬದಲು ಬೇರೆ ಮಾರ್ಗೋಪಾಯ ಕಂಡುಕೊಳ್ಳಲು ಎಸ್‌ಕೆಪಿಎ ಡಿಸಿಗೆ ಮನವಿ

Update: 2021-04-19 15:23 GMT

ಉಡುಪಿ, ಎ.19: ವರ್ಷಕ್ಕೊಂದು ಬಾರಿ ಎಪ್ರಿಲ್, ಮೇ ತಿಂಗಳಲ್ಲಿ ಬರುವ ಸೀಸನ್ ಅವಧಿಯೇ ಛಾಯಾಗ್ರಾಹಕರಿಗೆ ಆರ್ಥಿಕ ಸುಧಾರಣೆಗೊಂದು ಆಶಾ ಕಿರಣ. ಆದುದರಿಂದ ಈ ಅವಧಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡದೆ ಕೊರೋನಾ ನಿರ್ಮೂಲನೆಗೆ ಬೇರೆ ರೀತಿಯ ಮಾರ್ಗೋಪಾಯಗಳನ್ನು ಕಂಡು ಕೊಂಡು ನಮಗೆ ದುಡಿದು ನೆಮ್ಮದಿಯ ಜೀವನ ಸಾಗಿಸಲು ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿ ಯೇಶನ್ ಉಡುಪಿ ವಲಯದ ವತಿಯಿಂದ ಇಂದು ಉಡುಪಿ ಶಾಸಕರು, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ ಹಾಗೂ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.

ಕಳೆದ ಲಾಕ್‌ಡೌನ್ ನಿಂದಾದ ಆರ್ಥಿಕ ನಷ್ಟವನ್ನು ಸರಿದೂಗಿಸಲಾಗದೇ ಕೆಲವು ಛಾಯಾಗ್ರಾಹಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ಸಮಯದಲ್ಲಿ ಸರಕಾರ ದಿಂದ ಛಾಯಾಗ್ರಹಣ ವೃತ್ತಿಯವರಿಗೆ ಕವಡೆ ಕಾಸಿನ ಸಹಾಯವೂ ಸಿಕ್ಕಿಲ್ಲ. ಮುಂದೆ ಲಾಕ್‌ಡೌನ್ ಘೋಷಣೆಯಾಗಿ ಸಮಾರಂಭಗಳಿಗೆ ನೂರು ಅಥವಾ ಇನ್ನೂರು ಜನ ನಿಗದಿಪಡಿಸಿದರೆ ನಮ್ಮ ವೃತ್ತಿಯಲ್ಲಿ ಜೀವನ ಸಾಗಿಸುವುದು ಅಸಾಧ್ಯ. ಸಮಾರಂಭಗಳಿಗೆ ನಿರ್ಬಂಧ ಹೇರಿದರೆ ಉಳಿದ ಛಾಯಾಗ್ರಾಹಕರೂ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಮನವಿಯಲ್ಲಿ ಹೇಳಲಾಗಿದೆ.

ಕೊರೋನಾ ನೈಟ್ ಕರ್ಫ್ಯೂ ಸಮಯದಲ್ಲಿ ಛಾಯಾ ಗ್ರಾಹಕರು ರಾತ್ರಿ ಸಮಾರಂಭದ ಚಿತ್ರೀಕರಣ ಮುಗಿಸಿ ಹಿಂತಿರುಗುವಾಗ ಪೊಲೀಸರು, ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಮನೆ ತಲುಪಲು ಅವಕಾಶ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್, ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ್ ಕೊಡವೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಉಡುಪಿ ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು, ಕಾರ್ಯದರ್ಶಿ ಸುಕೇಶ್ ಅಮೀನ್ ಹಾಗು ಪತ್ರಕರ್ತ ಆಸ್ಟ್ರೋ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News