ಸಾರ್ವಜನಿಕ ಸಮಾರಂಭ, ಆಚರಣೆ, ಮನರಂಜನೆ ಕಾರ್ಯಕ್ರಮಗಳಿಗೆ ಪಾಸ್ ಕಡ್ಡಾಯ: ದ.ಕ.ಜಿಲ್ಲಾಧಿಕಾರಿ

Update: 2021-04-19 15:31 GMT

ಮಂಗಳೂರು,ಎ.19: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿ ಸರಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಯನ್ನು ನಿಯಂತ್ರಿಸಲು ಪಾಸ್ ಕಡ್ಡಾಯಗೊಳಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಸಾರ್ವಜನಿಕ ಸಮಾರಂಭ ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಸಂಬಂಧಿಸಿ ಪಾಸ್‌ಗಳನ್ನು ವಿತರಿಸಲು ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು, ಗ್ರಾಪಂ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಪಾಸ್‌ಗಳನ್ನು ವಿತರಿಸಲು ನಿರ್ದೇಶಿಸಿರುವ ಅಧಿಕಾರಿಗಳು ಆಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಹುದಾದ ಜನರ ಸಂಖ್ಯೆಗೆ ಅನುಗುಣವಾಗಿ ಅಥವಾ ಸರಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ವಯ, ಆಹ್ವಾನಿತರ ವಿವರಗಳನ್ನು ಪಡೆದು ಪಾಸ್‌ಗಳನ್ನು ವಿತರಿಸಿ ಕೋವಿಡ್ ಸಮುಚಿತ ವರ್ತನೆಗೆ ಬದ್ಧರಾಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು ಎಂದು ಸೂಚಿಸಿದ್ದಾರೆ.

ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೋವಿಡ್ ಸಮುಚಿತ ವರ್ತನೆಯ ಪಾಲನೆಯಾಗುತ್ತಿರುವುದನ್ನು ಖಾತರಿಪಡಿಸಿಕೊಳ್ಳುವುದು ಹಾಗೂ ತಪ್ಪಿದ್ದಲ್ಲಿ ಕಾರ್ಯಕ್ರಮ ಆಯೋಜಕರು, ಆವರಣ ಮಾಲಕರ ವಿರುದ್ಧ ಜಿಲ್ಲಾಡಳಿತದ ಆದೇಶದನ್ವಯ ದಂಡ ವಿಧಿಸಬೇಕು. ಸಂಬಂಧಪಟ್ಟ ಸಭಾಂಗಣ, ಕಲ್ಯಾಣ ಮಂಟಪ, ಹಾಲ್‌ಗಳು ಮತ್ತು ಆಚರಣೆಯ ಸಂಘಟಕರ ಪರವಾನಿಗೆಯನ್ನು ರದ್ದುಪಡಿಸುವುದು ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ-2020ರಡಿ, ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60 ಹಾಗೂ ಭಾರತೀಯ ದಂಡಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳುಬೇಕು ಎಂದು ಡಿಸಿ ತಿಳಿಸಿದ್ದಾರೆ.

ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನರು ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್‌ಗಳು ಇತ್ಯಾದಿ ಮುಚ್ಚಿದ ಸ್ಥಳಗಳಲ್ಲಿ 100 ಜನರು ಪಾಲ್ಗೊಳ್ಳಬಹುದು. ಜನ್ಮ ದಿನ ಹಾಗೂ ಇತರ ಆಚರಣೆಗಳು ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ನಿಧನ ಅಥವಾ ಶವಸಂಸ್ಕಾರ ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್‌ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ಅಂತ್ಯಕ್ರಿಯೆಗೆ 25 ಜನರು ಹಾಗೂ ಇತರೆ ಸಮಾರಂಭಗಳಿಗೆ ಹಾಲ್‌ನ ವಿಸ್ತೀರ್ಣಕ್ಕೆ ಅನುಗುಣವಾಗಿ 25 ಜನರು ಮತ್ತು ರಾಜಕೀಯ ಆಚರಣೆ ಹಾಗೂ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನರು ಪಾಲ್ಗೊಳ್ಳಬಹುದು. ಆದರೆ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ಲೋಪದೋಷವಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ತಪ್ಪಿದ್ದಲ್ಲಿ ಆಯಾ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಸಂಬಂಧಪಟ್ಟ ತಹಶೀಲ್ದಾರರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟಾಗಿ ಮೇಲ್ವಿಚಾರಣೆಯನ್ನು ನಿರ್ವಹಿಸಲು ನಿರ್ದೇಶಿಸಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News