ಕೋವಿಡ್ ನಿಯಮ ಉಲ್ಲಂಘಿಸಿದ ಐದು ಬಸ್‌ಗಳ ವಿರುದ್ಧ ಪ್ರಕರಣ

Update: 2021-04-19 15:41 GMT

ಉಡುಪಿ, ಎ.19: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಿಗದಿತ ಆಸನಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಖಾಸಗಿ ಬಸ್‌ಗಳ ವಿರುದ್ಧ ಸೋಮವಾರ ಕಾರ್ಯಾಚರಣೆಗೆ ಇಳಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಅಂತಹ ಐದು ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಲ್ಯಾಣಪುರ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾಸಗಿ ಬಸ್‌ಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಪ್ರಯಾಣಿಕರು ನಿಂತು ಪ್ರಯಾಣಿಸುತ್ತಿದ್ದ ಬಸ್‌ಗಳ ಚಾಲಕ ಮತ್ತು ನಿರ್ವಾಹಕರುನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ನಿಂತು ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಬೇರೆ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಸೂಚಿಸಿದರು. ಅವರಿಗೆ ಟಿಕೆಟ್ ಮೊತ್ತವನ್ನು ಹಿಂತಿರುಗಿಸುವಂತೆ ಡಿಸಿ ನಿರ್ವಾಹಕರಿಗೆ ತಿಳಿಸಿದರು. ಅದೇ ರೀತಿ ಮಾಸ್ಕ್ ಧರಿಸದ ನಿರ್ವಾಹಕರು, ಪ್ರಯಾಣಿಕರಿಂದ ದಂಡ ವಸೂಲಿಗೆ ಕ್ರಮ ಕೈಗೊಂಡರು. ನಂತರ ಮೆಡಿಕಲ್, ಅಂಗಡಿ, ಕ್ಲಿನಿಕ್, ಎಟಿಎಂ ಗಳಲ್ಲಿ ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿಸಲಾಯಿತು. ಕೆಲವು ಅಂಗಡಿ ಗಳಿಗೂ ದಂಡ ವಿಧಿಸಿ ಮೊತ್ತವನ್ನು ವಸೂಲಿ ಮಾಡಲಾಯಿತು. ಬಸ್ ಕಾಯು ತ್ತಿದ್ದ ವಿದ್ಯಾರ್ಥಿಗಳು, ವಾಹನ ಸವಾರರಿಗೆ ದಂಡ ವಿಧಿಸಲಾಯಿತು. ಕೆಲವರಿಗೆ ಡಿಸಿಯೇ ಸ್ವತಃ ಮಾಸ್ಕ್ ವಿತರಿಸಿ, ಕೋವಿಡ್ ಜಾಗೃತಿ ಮೂಡಿಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಐದು ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸ ಲಾಗಿದೆ.

ಇನ್ನು ಈ ರೀತಿ ಮುಂದುವರೆದರೆ ಬಸ್ ಮಾಲಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ರೀತಿ ಬಸ್‌ಗಳಲ್ಲಿ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುವು ದರಿಂದ ಕರೋನಾ ಸೋಂಕು ಹರಡಲು ದಾರಿಯಾಗುತ್ತದೆ. ಆದುದರಿಂದ ಸಾರ್ವಜನಿಕರು ಖಾಲಿ ಸೀಟು ಇದ್ದ ಬಸ್‌ಗಳಲ್ಲಿ ಮಾತ್ರ ಪ್ರಯಾಣಿಸಬೇಕು. ಅದು ಬಿಟ್ಟು ನಿಂತುಕೊಂಡು ಹೋಗಬಾರದು. ಸಾಕಷ್ಟು ಬಸ್‌ಗಳ ಸಂಖ್ಯೆ ಇದ್ದರೂ ಪ್ರಯಾಣಿಕರಿಗೆ ಕಾಯುವ ತಾಳ್ಮೆ ಇಲ್ಲದೆ ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಪಂ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ, ತಾಪಂ ಕಾ.ರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News