ಕಡಲಾಮೆ ರಕ್ಷಿಸಿ ಸಂತತಿ ಅಭಿವೃದ್ಧಿಗೆ ಕಾರ್ಯಯೋಜನೆ: ನೇತಾಲ್ಕರ್

Update: 2021-04-19 15:45 GMT

ಕುಂದಾಪುರ ಎ.19: ಹವಾಮಾನ ಬದಲಾವಣೆ ಮತ್ತು ಮಾನವ ಹಸ್ತಕ್ಷೇಪದ ಅಭಿವೃದ್ಧಿ ಕಾರ್ಯಗಳಿಂದ ಕಡಲಾಮೆ ಸಂತತಿ ಕ್ಷೀಣಿಸುತ್ತಿದೆ. ಈ ಅಪರೂಪದ ಕಡಲಾಮೆ ತಳಿಯನ್ನು ಸಂರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಾಲ್ಕರ್ ಹೇಳಿದ್ದಾರೆ.

ಅರಣ್ಯ ಇಲಾಖೆ ಕುಂದಾಪುರ ವಿಭಾಗ ಮತ್ತು ಖಾಸಗಿ ಸಂಘ - ಸಂಸ್ಥೆಗಳು ಹಾಗೂ ಆಸಕ್ತರ ಸಹಭಾಗಿತ್ವದಲ್ಲಿ ಸೋಮವಾರ ಆಯೋಜಿಸಲಾದ ಕಡಲಾಮೆ ಸಂರಕ್ಷಣೆ ಕುರಿತ ಕಾರ್ಯಾಗಾರ ಆಮೆಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಪಶ್ಚಿಮ ಕರಾವಳಿಯ ಹೊನ್ನಾವರದಿಂದ ಕುಂದಾಪುರದವರೆಗಿನ ಕಡಲ ತಡಿಯಲ್ಲಿ ಕಡಲಾಮೆಗಳು ಹೆಚ್ಚಾಗಿ ಬಂದು ಮೊಟ್ಟೆ ಇಡುತ್ತಿವೆ. ಇವುಗಳನ್ನು ಪ್ರಾಣಿ-ಪಕ್ಷಿ ಮತ್ತು ಕಳ್ಳರಿಂದ ರಕ್ಷಿಸಿ ಸಂತತಿ ಅಭಿವೃದ್ಧಿಗೆ ವ್ಯವಸ್ಥಿತ ಕಾರ್ಯ ಯೋಜನೆ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆಸಕ್ತರ ನೆರವಿನೊಂದಿಗೆ ಹಮ್ಮಿಕೊಂಡ ಆಮೆಹಬ್ಬ ಪ್ರಾಮುಖ್ಯತೆ ಪಡೆದಿದೆ ಎಂದರು. ಕುಂದಾಪುರ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಡಲಾಮೆ ಸಂತತಿಯ ಪರಿಚಯ, ಅವುಗಳ ಅಭಿವೃದ್ಧಿ, ಸಂರಕ್ಷಣೆ ಇತ್ಯಾದಿಗಳ ಕುರಿತು ವಿಡಿಯೋ ಪ್ರದರ್ಶನದೊಂದಿಗೆ ಕಾರ್ಯಾಗಾರದಲ್ಲಿ ತಜ್ಞರು ಮಾಹಿತಿ ನೀಡಿದರು. ಉಪ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸ್ವಾಗತಿಸಿ, ವಂದಿಸಿದರು.

ಕಡಲ್ಕೊರೆತ ತಡೆಗಾಗಿ ದಡದಲ್ಲಿ ನಿರ್ಮಿಸಿದ ಬಂಡೆ ಕಲ್ಲುಗಳ ತಡೆಗೋಡೆ ಆಮೆಗಳು ತೀರಕ್ಕೆ ಬಂದು ಮರಳಿನಲ್ಲಿ ಮೊಟ್ಟೆ ಇಡಲು ಅಡಚಣೆಯಾಗಿದೆ. ಅರಣ್ಯ ಇಲಾಖೆ ಆಮೆಗಳು ತೀರಕ್ಕೆ ಬಂದು ಮೊಟ್ಟೆ ಇಡುವ ಪ್ರಕ್ರಿಯೆಗಳ ಸಮಗ್ರ ದಾಖಲೀಕರಣ ಮಾಡಿದ್ದು, ಇದು ಈ ಕುರಿತು ಸಂಶೋಧನೆ ನಡೆಸುವ ವರಿಗೆ ಸಹಕಾರಿಯಾಗಿದೆಂದು ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ ಪ್ರಕಾಶ್ ನೇತಾಲ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News