ಸಮಸ್ತದ ಮಾಜಿ ಮ್ಯಾನೇಜರ್ ಪಿಣಂಗೋಡ್ ಆಬೂಬಕರ್ ನಿಧನ

Update: 2021-04-19 16:51 GMT

ಮಂಗಳೂರು, ಎ.19: ಸುಮಾರು ಎರಡು ದಶಕಗಳ ಕಾಲ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಜನರಲ್ ಮ್ಯಾನೇಜರ್ ಆಗಿದ್ದ ಖ್ಯಾತ ಚಿಂತಕ, ಬರಹಗಾರ, ಪಿಣಂಗೋಡ್ ಅಬೂಬಕರ್ (65) ಸೋಮವಾರ ಸಂಜೆ ವಯನಾಡ್ ಜಿಲ್ಲೆಯ ‌ಕಲ್ಪಟ್ಟದಲ್ಲಿರುವ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಎಸ್‌ವೈಎಸ್ ಕೇಂದ್ರ ಸಮಿತಿಯ ಕೋಶಾಧಿಕಾರಿಯಾಗಿ, ಸುನ್ನೀ ಮಹಲ್‌ಲ್ ಫೆಡರೇಶನ್‌ನ ಕೇಂದ್ರ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು ಸಮಸ್ತ ಶಿಕ್ಷಣ ಮಂಡಳಿಗೆ ಆಧುನಿಕ ಶಾಸ್ತ್ರೀಯ ಸ್ಪರ್ಶವನ್ನು ನೀಡಿದ್ದರು. ಸಮಸ್ತದ ಪಠ್ಯಪುಸ್ತಕಗಳನ್ನು ಎಲ್ಲಾ ಭಾಷೆಗಳಿಗೆ ವಿಸ್ತರಿಸುವ ಮೂಲಕ ಸಮಸ್ತವನ್ನು ಸಾರ್ವಜನಿಕಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಐವರು ಕನ್ನಡಿಗ ಮದ್ರಸ ತಪಾಸಣಾಧಿಕಾರಿ (ಮುಫತ್ತಿಸ್)ಗಳನ್ನು ವಿದ್ಯಾಭ್ಯಾಸ ಬೋರ್ಡಿಗೆ ಆಯ್ಕೆಮಾಡಿಕೊಂಡು ಅವರ ಮೂಲಕ ಸಮಸ್ತದ ಪಠ್ಯಪುಸ್ತಕಗಳನ್ನು ಅಗತ್ಯವಾದ ಕಡೆಗೆ ಕನ್ನಡ ಮತ್ತು ಉರ್ದುವಿನಲ್ಲಿ ಮುದ್ರಿಸಲು ವ್ಯವಸ್ಥೆ ಮಾಡಿದ್ದರು.

ಮದ್ರಸ ಪಬ್ಲಿಕ್ ಪರೀಕ್ಷೆಗೆ ಆಧುನಿಕ ಶಾಸ್ತ್ರೀಯ ವಿನ್ಯಾಸಗಳು ಮತ್ತು ಕೇಂದ್ರೀಕೃತ ಮೌಲ್ಯಮಾಪನಗಳನ್ನು ಜಾರಿಗೆ ತಂದಿದ್ದರು. ಕನ್ನಡಿಗರೊಂದಿಗೆ ಅಪಾರವಾದ ಪ್ರೀತಿ, ವಿಶ್ವಾಸ ಹೊಂದಿದ್ದ ಅವರು ಜಿಲ್ಲೆಗೆ ಹಲವು ಬಾರಿ ಆಗಮಿಸಿ ಉಲಮಾ, ಉಮರಾ ತರಗತಿಗಳನ್ನು ನಡೆಸಿಕೊಟ್ಟಿದ್ದರು. ಮಲಯಾಳದಲ್ಲಿ ನೂರಾರು ಪುಸ್ತಕಗಳನ್ನು ರಚಿಸಿದ್ದ ಅವರ ಕೆಲವು ಕೃತಿಗಳು ಕನ್ನಡದಲ್ಲಿಯೂ ಭಾಷಾಂತರಗೊಂಡಿದೆ. ಸಮಸ್ತದ ‘ಸುಪ್ರಭಾತ’ ಮಲಯಾಳ ದೈನಿಕ ಪ್ರಾರಂಭಗೊಂಡಾಗ ಅದರ ಸ್ಥಾನೀಯ ಸಂಪಾದಕರಾಗಿ ಭಡ್ತಿ ಪಡೆದು ಮಾನೇಜರ್ ಹುದ್ದೆಯಿಂದ ನಿರ್ಗಮಿಸಿದ್ದರು.

ಸಂತಾಪ:
ಪಿಣಂಗೋಡ್ ಅಬೂಬಕರ್ ಅವರ ನಿಧನಕ್ಕೆ ಸಮಸ್ತದ ಮದ್ರಸ ತಪಾಸಣಾಧಿಕಾರಿಗಳಾದ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಕಾಸಿಂ ಮುಸ್ಲಿಯಾರ್ ಮಠ, ಹನೀಫ್ ಮುಸ್ಲಿಯಾರ್ ಬೋಳಂತೂರು, ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ, ಉಮರುಲ್ ಫಾರೂಕ್ ದಾರಿಮಿ ತೆಕ್ಕಾರ್, ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಹಾಜಿ ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್ ಇಸ್ಮಾಯಿಲ್ ಕಲ್ಲಡ್ಕ, ಜಂಇಯ್ಯತುಲ್ ಖುತಬಾ ದ.ಕ. ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ಸಂತಾಪ ಸೂಚಿಸಿದ್ದಾರೆ.

ಪಿಣಂಗೋಡ್ ಅಬೂಬಕರ್ ಅವರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಚೇಳಾರಿಯ ಸಮಸ್ತ ಕಾರ್ಯಾಲಯಗಳಿಗೆ ರಜೆ ಸಾರಲಾಗಿದೆ ಎಂದು ಸಮಸ್ತದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News